ದೇಶದ ಆರ್ಥಿಕ ಸುಧಾರಣೆಗೆ ಪ್ರಧಾನಿಯ ದಿಟ್ಟಹೆಜ್ಜೆ
ನೂತನ ಹಣಕಾಸು ವ್ಯವಸ್ಥೆ

ನೂತನ ವ್ಯಾವಹಾರಿಕ ತಂತ್ರಜ್ಞಾನದ ಸದುಪಯೋಗದಿಂದ ಬಡವರಲ್ಲಿ ಅತಿ ಬಡವರಾದ ಜನಸಾಮಾನ್ಯ ಅವಕಾಶ ಪಡೆಯುವ, ಸಾಮಾಜಿಕ ನ್ಯಾಯ ದೊರಕುವ, ಸಾಮಾಜಿಕ ಆರ್ಥಿಕ ಸಬಲೀಕರಣ ಕಾಣುವ, ಆಶಾದಾಯಕ ದಿನ ದೇಶದಲ್ಲಿ ಬರಲಿದೆ. ಹಲವು ದಶಕಗಳಿಂದ ಜಿಡ್ಡು ಹಿಡಿದು ಹೋಗಿದ್ದ ಹಳೆ ವ್ಯವಸ್ಥೆ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ಹೆಜ್ಜೆಯಲ್ಲಿ ಹಲವು ಸ್ಥಾಪಿತಹಿತಾಸಕ್ತಿಯ ಕುಳಗಳ ಅಸ್ತಿತ್ವ ಬುಡಮೇಲಾದರೆ, ಜನಸಾಮಾನ್ಯ ಸುಗಮ ವ್ಯವಸ್ಥೆಯ ನಿಟ್ಟುಸಿರು ಬಿಟ್ಟಿರುವುದನ್ನು ಕಾಣಬಹುದು.
ನೂತನ ವ್ಯವಹಾರ ವ್ಯವಸ್ಥೆ ಮೂಲಕ ಆರ್ಥಿಕ ಸುಧಾರಣೆಯ ಬದಲಾವಣೆಯ ಗಾಳಿ ಬೀಸುತ್ತಿದೆ. ನಗದು ಹಣದ ಕೊರತೆಯ ಮುಗ್ಗಟ್ಟು ಇನ್ನೂ ಗಹನವಾಗಿದೆ, ಡಿಜಿಟಲ್ ವ್ಯವಹಾರ ವ್ಯವಸ್ಥೆ ಮತ್ತು ಕಾರ್ಯದಕ್ಷತೆ ಸಾಕಷ್ಟು ಪ್ರಮಾಣದಲ್ಲಿ ತನ್ನ ಗುರಿ ತಲುಪಿಲ್ಲ, ಆದರೂ ಈ ಯೋಜನೆಯ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ, ಜನಸಾಮಾನ್ಯರು ತಮ್ಮ ಕಷ್ಟಕೋಟಲೆಗಳನ್ನೆಲ್ಲಾ ಸಹಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸುಧಾರಣೆಯ ಬದಲಾವಣೆ ಪರ್ವಕ್ಕೆ ನೀಡಿದ ಕರೆಗೆ ಒತ್ತುಕೊಟ್ಟು ಜೊತೆ ಸೇರಿ ಈ ಮಹಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.
‘‘ಡಿಜಿಟಲ್ ಪಾವತಿಯಲ್ಲಿ 300 ಪ್ರತಿಶತ ಹೆಚ್ಚಳಕಂಡಿದೆ’’ ಎಂದು ಕೇಂದ್ರ ಜವುಳಿ ಸಚಿವೆ ಸ್ಮತಿ ಇರಾನಿ ಟ್ವೀಟ್ ಮಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ನೂತನ ವ್ಯವಸ್ಥೆಗೆ ಜನಸಾಮಾನ್ಯರು ಸಹಜವಾಗಿ ಒಗ್ಗಿಕೊಳ್ಳ ತೊಡಗಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತೊಡಗಿಕೊಳ್ಳುವ ಗ್ರಾಹಕ ಮತ್ತು ವ್ಯಾಪಾರಿಗಳಿಗಾಗಿ ರೂಪಾಯಿ ಒಂದು ಕೋಟಿ ತನಕದ ಅದೃಷ್ಟ ಬಹುಮಾನ ಮತ್ತು ಪುರಸ್ಕಾರಗಳನ್ನೂ ಸರಕಾರ ಘೋಷಿಸಿದೆ. ಇಂದಿನ ಚಳಿಗಾಲದ ಮಾರುಕಟ್ಟೆಯಲ್ಲಿ, ಗುರುಗಾವ್ ಉಪನಗರದಲ್ಲಿ ತರಕಾರಿ ವ್ಯಾಪಾರಿ, ಗೌಹಾಟಿಯ ಮಾಯಾಂಗ್ ಮಾರುಕಟ್ಟೆಯಲ್ಲಿ ದಿನಸಿ ವ್ಯಾಪಾರಿ ಈ ನೂತನ ಆರ್ಥಿಕ ಹಣಕಾಸು ವ್ಯವಸ್ಥೆ - ಡಿಜಿಟಲ್ ಪಾವತಿ ಪದ್ಧತಿಗೆ ಹೊಂದಿಕೊಂಡು ಬಳಸಿಕೊಳ್ಳುವುದನ್ನು ಸರಳವಾಗಿ ವ್ಯಾಪಾರ ಮಾಡುವುದನ್ನು ಕಾಣಬಹುದು. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕದಲ್ಲಿ ಪುನಶ್ಚೇತನ ವೃದ್ಧಿಸತೊಡಗಿದೆ.
ನವೆಂಬರ್ 8ರ ನಂತರ ದೇಶದಾದ್ಯಂತ ವಿವಿಧಡೆ ನಡೆದ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳ ಸಕಾರಾತ್ಮಕ ಅಲೆ, ಆಡಳಿತ ಪಕ್ಷಕ್ಕೆ ಸಿಕ್ಕ ಕೊಡುಗೆ ಅನ್ನಬಹುದು. ಇದನ್ನು ವಿರೋಧಿಸುವ, ಕೊರತೆ ಕಾಣುವ, ದೂಷಿಸುವ ಯಾರಾದರೂ ಇದರ ಹೊರತಾಗಿ ಇನ್ನೂ ಉತ್ತಮ ಆರ್ಥಿಕ ಪರ್ಯಾಯ ವ್ಯವಸ್ಥೆ ಊಹಿಸಲೂ ಸಾಧ್ಯವಿಲ್ಲ.
ಸಕಾರಾತ್ಮಕ ಫಲಿತಾಂಶ ಕಾಣತೊಡಗಿದೆ. ನಗದು ಹಣಕಾಸಿನ ಮುಗ್ಗಟ್ಟು ಕೃಷಿಕ್ಷೇತ್ರಕ್ಕೆ ಬಾಧೆೆಯಾಗಬಹುದೆಂದು ಲೆಕ್ಕಹಾಕಿದವರ ಲೆಕ್ಕಾಚಾರ ಕಳೆದ ವರ್ಷಕ್ಕಿಂತ ಅಧಿಕ ಭೂಮಿಯಲ್ಲಿ ಕೃಷಿ ಬೆಳೆಗೆ ಯೋಗ್ಯವಾಗುವ ಮೂಲಕ ತಲೆಕೆಳಗಾಯಿತು. ಮೊಬೈಲು ಮತ್ತು ಅಂತರ್ಜಾಲ ಮೂಲಕ ಹೆಚ್ಚು ಹೆಚ್ಚು ವ್ಯಾವಹಾರಿಕ ಪಾವತಿಗಳಾಗತೊಡಗಿತು. ಇದು ಅಧಿಕ ಮಂದಿ ಈ ವ್ಯವಸ್ಥೆಯನ್ನು ಒಪ್ಪಿಕೊಂಡದ್ದಕ್ಕೆ ನಿದರ್ಶನ. ಆಹಾರ, ತರಕಾರಿ, ಅಟೊಮೊಬೈಲು, ಗ್ರಾಹಕ ಬಳಕೆ ವಸ್ತುಗಳು, ಬೆಲೆ ಕಡಿತ ಕಾಣತೊಡಗಿದವು.
ಹಣದುಬ್ಬರ ಇಳಿತ ಕಾಣತೊಡಗಿದೆ. ಚಹಾ ತೋಟದ ಅಸಂಘಟಿತ ಕಾರ್ಮಿಕರೂ, ಬ್ಯಾಂಕು ಖಾತೆ ತೆರೆದು ವ್ಯವಹರಿಸಲು ಆಸಕ್ತರಾದರು. ಸಾಮಾಜಿಕವಾಗಿ, ಹಣಕಾಸು ವಿಷಯದ ಅಪರಾಧಗಳು ಕಳೆದ 6 ವಾರಗಳಲ್ಲಿ ಗಣನೀಯವಾಗಿ ಕಡಿಮೆಯಾಗತೊಡಗಿದೆ. ಶ್ರೀನಗರದಲ್ಲಿ ಕಲ್ಲು ತೂರಾಟ ನಿಂತಿತು. ಈ ಮೂಲಕ ಸುಗಮವಾಗುತ್ತಿದ್ದ ಪಾಕಿಸ್ತಾನದಿಂದ ಬರುತ್ತಿದ್ದ ಅಗಾಧ ಪ್ರಮಾಣದ ನಕಲಿ ನೋಟು ಸಾಗಾಟ ಮತ್ತು ಕಾಳಧನ ಕಣ್ಮರೆಯಾಯಿತು.
ಅಮಾನ್ಯಗೊಂಡ ಅಧಿಕ ಮೊತ್ತದ 14.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಲ್ಲಿ 12 ಲಕ್ಷ ಕೋಟಿ ರೂಪಾಯಿ ಈಗಾಗಲೇ ಬ್ಯಾಂಕು ಖಜಾನೆ ಸೇರಿವೆ. ವಿರೋಧ ಪಕ್ಷಗಳು ಕೇಳುತ್ತವೆ, ಇದರಲ್ಲೇನು ಮಹಾ ಸಂಗತಿ ಅಡಗಿದೆ? ‘‘ನಕಲಿ ನೋಟುಗಳು ಕೇವಲ ಶೇ. 2 ಮಾತ್ರ, ಕಾಳಧನ ಸಂಗ್ರಹ ನಿಲುಗಡೆ ಹೇಳುವಷ್ಟು ಸುಲಭದಲ್ಲಿ ಸಾಧ್ಯವಿಲ್ಲ.’’ ಇದು ನಿರಾಶಾದಾಯಕ ಜನರ ಅಸಹಾಯಕತೆಯ ಮಾತು. ಆದರೆ, ನೋಟಿನ ಅಮಾನ್ಯತೆಯ ಮುಖ್ಯ ಉದ್ದೇಶ ಕೂಡಿಟ್ಟ ಚಲಾವಣೆ ರಹಿತ 10 ಲಕ್ಷ ಕೋಟಿ ಹಣವನ್ನು ವ್ಯವಸ್ಥೆಯಲ್ಲಿ ಪುನಃ ತೊಡಗಿಸಿಕೊಳ್ಳುವುದಾಗಿತ್ತು. ಎರಡನೆಯದು, ತೆರಿಗೆ ಪಾವತಿಸದ ಅಪಾರ ಜನಸಮೂಹವನ್ನು ಚೌಕಟ್ಟಿನಲ್ಲಿ ಸೇರಿಸುವುದಾಗಿದೆ.
ಇವೆರಡೂ ಸಾಧ್ಯವಾಗಿದೆ. ನಕಲಿ ನೋಟಿನ ವ್ಯಾಪ್ತಿ ಚರ್ಚೆಯ ವಿಷಯ. ಅತ್ಯಂತ ಪ್ರಮುಖ ವಿಷಯವೆಂದರೆ, ಇವರು ಹಳೆ ಭದ್ರ ವ್ಯವಸ್ಥೆಯನ್ನು ಛಿದ್ರಗೊಳಿಸಿದರು. ಮಾವೋ ವಾದಿಗಳು, ಜಮ್ಮು ಮತ್ತು ಕಾಶ್ಮೀರ ಜಿಹಾದಿಗಳು ಮತ್ತು ಹವಾಲ ವ್ಯವಹಾರಿಗಳು ಇಂದು ಕೆಲಸ ಕಳೆದುಕೊಂಡಿದ್ದಾರೆ. ಇದೊಂದು ಅತ್ಯಂತ ಮಹತ್ತರ ಸಂಗತಿ. ದಾವೂದಿನ ಹವಾಲ ವ್ಯವಹಾರದ ಬಲಗೈಬಂಟ ಪಾಕಿಸ್ತಾನಿ, ಜಾವೇದ್ ಖನಾನಿ ನೋಟಿನ ಅಮಾನ್ಯತೆಯಿಂದಾಗಿ ವ್ಯವಹಾರದಲ್ಲಿ ಅಪಾರ ನಷ್ಟವುಂಟಾಗಿ ಆತ್ಮಹತ್ಯೆಗೈದ.
ನೋಟಿನ ಅಮಾನ್ಯತೆ ಯಶಸ್ಸಾಗಬಹುದೇ? ಇದರಿಂದಾಗಿ ಪ್ರಗತಿ ಕುಂಠಿತ ಕಾಣಬಹುದೇ? ಇದರ ಪರಿಣಾಮದಿಂದಾಗಿ ಉದ್ಯೋಗ ನಷ್ಟ ಉಂಟಾದೀತೇ? ಗ್ರಾಮೀಣ ಬಡವರ ಮತ್ತು ಕೃಷಿಕರ ಜೀವನ ತತ್ತರವಾದೀತೇ? ಇದರಿಂದಾಗಿ ಬೆಲೆ ಹೆಚ್ಚಳವಾಗಿ, ಹಣದುಬ್ಬರವಾದೀತೇ? ಇದರಿಂದಾಗಿ ಆರ್.ಬಿ.ಐ ಗೆ ಹಿನ್ನಡೆಯಾದೀತೇ? ಇದರಿಂದಾಗಿ ಸರಕಾರಕ್ಕೆ ಉತ್ತಮ ಹಾಗೂ ಸರಿತೂಕದ ಮುಂಗಡ ಆಯವ್ಯಯ ಪತ್ರ ಮುಂದಿನ ಬಾರಿ ಪ್ರಕಟಿಸಲು ಸಾಧ್ಯವೇ? ಮುಂಬರುವ 2017 ಮುಂಗಡ ಆಯವ್ಯಯ ಪತ್ರ ತೆರಿಗೆ ಕಡಿತ, ಕಡಿಮೆ ತೆರಿಗೆಯ ಉತ್ತಮ ಕೊಡುಗೆಗಳ ಮಹಾಪೂರವಾಗಿರಬಹುದೆಂದು ಜನಸಾಮಾನ್ಯ ಊಹಿಸಬಹುದೇ?
ಇವುಗಳೆಲ್ಲ, ನವೆಂಬರ್ 8ರ ನಂತರ ಪ್ರಧಾನಿ ಮೋದಿ ಬೆಂಬಲಿಗರಿಗೆ ಮತ್ತು ವಿರೋಧಿಗಳಿಗೆಲ್ಲ ತಲೆಯಲ್ಲಿ ಹೊಳೆದ ಹತ್ತು ಹಲವು ಆಶಯ ಮತ್ತು ಸಂಶಯಗಳ ಜೊತೆ ಹೊಳೆದ ಇತರ ಮಹತ್ತರ ವಿಷಯಗಳು. ಇದು ಅವರವರ ಅನುಭವಕ್ಕೆ ಮೂಡಿಬಂದ ವಿಚಾರಗಳು. ಆದರೆ ಫಲಿತಾಂಶ ಮಾತ್ರ ವಾಸ್ತವದ ಅತ್ಯುತ್ತಮ ಸತ್ಯಾಂಶವಾಗಿದೆ. ಕ್ಷುಲ್ಲಕ ವಿಚಾರ-ಚಿಂತನೆಯ ಹೇಳಿಕೆ ಮಾತುಗಳೆಲ್ಲ ನೆಲೆಬೆಲೆ ಕಳೆದುಕೊಂಡವು. ನೋಟಿನ ಅಮಾನ್ಯತೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಡವರ ಪುನರುದ್ಧಾರಕನನ್ನಾಗಿಸಿದೆ. ಭಾರತದ ದಲಿತ, ದೌರ್ಜನ್ಯ, ಅವಕಾಶವಂಚಿತ, ತುಳಿತಕ್ಕೊಳಗಾದವರೊಂದಿಗಿನ ಅವರ ಸಂಪರ್ಕ ಪರಿಪೂರ್ಣವಾಗಿಸುತ್ತದೆ, ಇದನ್ನು ಮೋದಿ ಅವರ ಅತ್ಯಂತ ಪ್ರಭಾವಿ ಸಾಮಾಜಿಕ ಪರಿವರ್ತನೆಯ ಕ್ರಾಂತಿ ಕಾರ್ಯವೆನ್ನಬಹುದು. ಇದರಿಂದಾಗಿ ಪ್ರಧಾನಿ ಮೋದಿ ಜನಸಾಮಾನ್ಯನ ಸಮೀಪ ತಲುಪಿದ್ದಾರೆ. ಇನ್ನು ಮುಂದಿನ ದಿನಗಳ ರಾಜಕೀಯ ಭಿನ್ನವಾಗಿರುತ್ತದೆ. ತೆರಿಗೆ ಕಡಿಮೆಯಾಗುತ್ತದೆ. ಹೂಡಿಕೆ ಹೆಚ್ಚುತ್ತದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ.
ತೆರಿಗೆ ಕಳ್ಳರ, ಕಾಳಧನಿಕರ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಕೂಡಿಟ್ಟ ಸಂಪತ್ತು ವಶಪಡಿಸಿಕೊಂಡಿ ದ್ದಾರೆ. ಚಿನ್ನ, ಆಭರಣ, ಚಿನ್ನದ ಗಟ್ಟಿ, ಅಕ್ರಮ ಸಂಪತ್ತು, ನಕಲಿ ನೋಟು, ಕಾಳಧನ ಜೊತೆ ಬ್ಯಾಂಕು ಅಧಿಕಾರಿ ಗಳು, ಸರಕಾರಿ ಅಧಿಕಾರಿಗಳು ಕೈ ಜೋಡಿಸಿರುವುದು ಹಲವಡೆ ಬೆಳಕಿಗೆ ಬಂದಿದೆ. ಚಲಾವಣೆಗೆ ಹಣವಿಲ್ಲದೆ ಮಾವೋ ವಾದಿಗಳ, ಭಯೋತ್ಪಾದಕರ ಮತ್ತು ಅಪರಾಧಿಗಳ ಕೆಲಸ ನಿಂತಿದೆ. ಡಿಜಿಟಲ್ ವ್ಯವಹಾರದಿಂದ ಇನ್ನೂ ಹಲವು ಪ್ರಯೋಜನ ಗಳು ಮುಂಬರುವ ದಿನಗಳಲ್ಲಿ ಜನಸಾಮಾನ್ಯ ಗಮನಿಸಬಹುದು
ನೂತನ ವ್ಯಾವಹಾರಿಕ ತಂತ್ರಜ್ಞಾನದ ಸದುಪಯೋಗದಿಂದ ಬಡವರಲ್ಲಿ ಅತಿ ಬಡವರಾದ ಜನಸಾಮಾನ್ಯ ಅವಕಾಶ ಪಡೆಯುವ, ಸಾಮಾಜಿಕ ನ್ಯಾಯ ದೊರಕುವ, ಸಾಮಾಜಿಕ ಆರ್ಥಿಕ ಸಬಲೀಕರಣ ಕಾಣುವ, ಆಶಾದಾಯಕ ದಿನ ದೇಶದಲ್ಲಿ ಬರಲಿದೆ. ಹಲವು ದಶಕಗಳಿಂದ ಜಿಡ್ಡು ಹಿಡಿದು ಹೋಗಿದ್ದ ಹಳೆ ವ್ಯವಸ್ಥೆ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ಹೆಜ್ಜೆಯಲ್ಲಿ ಹಲವು ಸ್ಥಾಪಿತಹಿತಾ ಸಕ್ತಿಯ ಕುಳಗಳ ಅಸ್ತಿತ್ವ ಬುಡಮೇಲಾದರೆ, ಜನಸಾಮಾನ್ಯ ಸುಗಮ ವ್ಯವಸ್ಥೆಯ ನಿಟ್ಟುಸಿರು ಬಿಟ್ಟಿರುವುದನ್ನು ಕಾಣಬಹುದು
ಪ್ರಧಾನಿ ಮೋದಿ ಅವರ ಜನಸಾಮಾನ್ಯರೆಲ್ಲರ ಆರ್ಥಿಕ ಸೇರ್ಪಡೆ ಚಿಂತನೆ ಸಮಕಾಲೀನ ಮತ್ತು ವಾಸ್ತವವಾಗಿದೆ. ನೋಟಿನ ಅಮಾನ್ಯತೆಯ ಉತ್ತಮ ಪರಿಣಾಮಗಳನ್ನು ಕಳೆದ 20 ದಿನಗಳಲ್ಲಿ ಸಾಕಷ್ಟು ಬಾರಿ ತಿಳಿಸಿ, ಪ್ರಶ್ನೆಗಳಿಗೆಲ್ಲ ಉತ್ತರಿಸಲಾಗಿದೆ. ಪೌರ ಸಂಸ್ಥೆಗಳಲ್ಲಿ ತೆರಿಗೆಯ ಹಣದ ಮಹಾಪೂರವೇ ಹರಿಯಿತು, ಬ್ಯಾಂಕುಗಳು ಸುಮಾರು 12 ಲಕ್ಷ ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದವು. ಬ್ಯಾಂಕುಗಳು ನೀಡುವ ಸಾಲಕ್ಕೆ ಬಡ್ಡಿದರ ಕಡಿತಗೊಳಿಸಲಿವೆ, ಅಲ್ಲದೆ ಮುಂಬರುವ ಫೆಬ್ರವರಿಯ ಮುಂಗಡ ಆಯವ್ಯಯ ಮಂಡನೆಯಲ್ಲಿ ಜನಸಾಮಾನ್ಯರ ಕನಸು ನನಸಾಗುವ ನೂತನ ಹಲವು ಆಶಯ ಕಾಣಬಹುದು. ಇವುಗಳೆಲ್ಲ ಹಲವು ಆಯಾಮಗಳಲ್ಲಿ ಪ್ರಗತಿ ಕಾಣಬಹುದಾದ ಅವಕಾಶವಾಗಿದ್ದು, ಉಳಿದವರು ಕಳೆದುಕೊಂಡ ಈ ಅವಕಾಶವನ್ನು ಮೋದಿಯವರು ಸದುಪಯೋಗ ಪಡಿಸಿಕೊಂಡರು.







