ಸೊರಗುತ್ತಿದೆ... ದ.ಕ. ಜಿಲ್ಲೆಯ ಪ್ರವಾಸೋದ್ಯಮ

ಮಂಗಳೂರು, ಡಿ.13: ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಗುರುತಿಸಲ್ಪಟ್ಟಿರುವ ದ.ಕ. ಜಿಲ್ಲೆ ಪ್ರವಾಸೋದ್ಯಮದಲ್ಲಿ ಸೊರಗುತ್ತಿವೆ. ಇಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಕೂಡ ಸರಕಾರದ ನಿರಾಸಕ್ತಿಯೋ, ಜಿಲ್ಲೆಯ ಜನರಿಗೆ ತಮ್ಮ ಪ್ರವಾಸಿ ಕ್ಷೇತ್ರಗಳ ಬಗೆಗಿನ ಅಸಡ್ಡೆಯೋ ಏನೊ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಿನ್ನಡೆಯುಂಟಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯು ದ.ಕ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಸಹಿತ 18 ತಾಣಗಳನ್ನು ಪ್ರವಾಸಿ ಕ್ಷೇತ್ರ ಎಂದು ಗುರುತಿಸಿಕೊಂಡಿದ್ದು, ಅದರಲ್ಲಿ 11 ತಾಣಗಳು ಮಂಗಳೂರು ನಗರದಲ್ಲೇ ಇರುವುದು ವಿಶೇಷ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಪೊಳಲಿ, ಕಟೀಲು, ಮಂಗಳಾದೇವಿ, ಕದ್ರಿ, ಕುದ್ರೋಳಿ, ಮುಲ್ಕಿ ಬಪ್ಪನಾಡು, ಶ್ರೀಕ್ಷೇತ್ರ ಸೋಮೇಶ್ವರ, ಬಾವುಟಗುಡ್ಡೆಯ ಸಂತ ಅಲೋಶಿಯಸ್ ಚಾಪೆಲ್, ಉಳ್ಳಾಲ ದರ್ಗಾ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಪಿಲಿಕುಳ ನಿಸರ್ಗಧಾಮ, ಸುಲ್ತಾನ್ ಬತ್ತೇರಿ, ಸೋಮೇಶ್ವರ ಬೀಚ್, ತಣ್ಣೀರುಬಾವಿ ಬೀಚ್, ಪಣಂಬೂರು ಬೀಚ್, ಸಸಿಹಿತ್ಲು ಬೀಚ್‌ಗಳನ್ನು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕ್ಷೇತ್ರ ಎಂದು ತನ್ನ ನಕಾಶೆಯಲ್ಲಿ ಕಾಣಿಸಿದೆ. ಆದರೆ ಜಿಲ್ಲೆಯ ಇನ್ನೂ ಹಲವೆಡೆ ಪ್ರಮುಖ ಕ್ಷೇತ್ರಗಳಿವೆ. ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಕಣ್ಮನ ಸೆಳೆಯುವ ಗುಡ್ಡಪ್ರದೇಶಗಳು, ನದಿ ತೀರದ ಪ್ರದೇಶಗಳನ್ನು ಕೂಡ ಪ್ರವಾಸೋದ್ಯಮ ಇಲಾಖೆ ಗುರುತಿಸಿದರೆ ಪ್ರವಾಸಿಗರು ಆಕರ್ಷಿತರಾಗುವ ಸಾಧ್ಯತೆಯಿದೆ.
*ಮೂಲಭೂತ ಸೌಕರ್ಯದ ಕೊರತೆ: ಬಹುತೇಕ ಪ್ರವಾಸಿ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಸುಸಜ್ಜಿತ ರಸ್ತೆ, ದಾರಿದೀಪ, ಹೈಮಾಸ್ಟ್ ದೀಪ, ಶೌಚಾಲಯ, ಕುಡಿಯುವ ನೀರು ಇಲ್ಲದಿರುವುದು, ಸೂಕ್ತ ಭದ್ರತೆ ಸಹಿತ ಕಾವಲುಗಾರರು, ಮಾಹಿತಿ ಗೋಡೆ ಇಲ್ಲದಿರುವುದು ಹೀಗೆ ಅನೇಕ ಕೊರತೆಗಳನ್ನು ಪಟ್ಟಿ ಮಾಡಬಹುದು.
ಹೊರ ರಾಜ್ಯ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಪ್ರವಾಸಿ ಕ್ಷೇತ್ರಗಳ ಮತ್ತು ಜಿಲ್ಲೆಯ ಜನರ, ಆಹಾರ-ಉಡುಗೆ-ತೊಡುಗೆ-ಸಂಸ್ಕೃತಿ, ಭಾಷೆಗಳ ಬಗ್ಗೆ ಮಾಹಿತಿ ನೀಡುವ, ಪ್ರವಾಸಿಗರನ್ನು ಪ್ರವಾಸಿ ಕ್ಷೇತ್ರಗಳಿಗೆ ಕರೆದೊಯ್ಯುವ ‘ಗೈಡ್’ಗಳ ಕೊರತೆಯೂ ಜಿಲ್ಲೆಯಲ್ಲಿದೆ. ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ, ಮಂಗಳೂರು ವಿವಿ ಸರಕಾರಿ ಕಾಲೇಜು, ಬಿಜೈಯ ಶ್ರೀಮತಿ ಬಾಯಿ ಸ್ಮಾರಕ ಮ್ಯೂಸಿಯಂ, ಉಳ್ಳಾಲ ಕೋಟೆಪುರದಲ್ಲಿ ಸಮುದ್ರ-ನದಿ ಸಂಗಮ ಸ್ಥಳ, ಕಾಜೂರು, ಅಜಿಲಮೊಗರು ದರ್ಗಾ, ಮುಡಿಪು ಚರ್ಚ್, ಮಿಲಾಗ್ರಿಸ್, ರೊಝಾರಿಯೊ ಚರ್ಚ್, ಉಳ್ಳಾಲ ಸಮ್ಮರ್ ಸ್ಯಾಂಡ್ ಬೀಚ್, ಉಳ್ಳಾಲ ರಾಣಿ ಅಬ್ಬಕ್ಕದೇವಿ ಆಳಿದ ಸ್ಥಳಗಳು, ಅಬ್ಬಕ್ಕ ದೇವಿಯ ಜೈನಬಸದಿ ಹೀಗೆ ಹಲವಾರು ತಾಣಗಳನ್ನು ಗುರುತಿಸಿದರೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ಬಂದೀತು.
ಕರಾವಳಿ ಬೀಚ್‌ಗಳ ತಾಣ. ಹೊರ ಜಿಲ್ಲೆ, ರಾಜ್ಯದ ಪ್ರವಾಸಿಗರು ಬೀಚ್‌ನಲ್ಲಿ ವಿಹರಿಸುವ ಕನಸು ಕಂಡು ಇಲ್ಲಿಗೆ ಆಗಮಿಸುವುದು ಸಹಜ. ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪ್ರವಾಸೋದ್ಯಮಕ್ಕೆ ನೀಡಬೇಕಾದ ಆದ್ಯತೆಗಳೇನು? ಇಲ್ಲಿನ ಪ್ರವಾಸಿ ತಾಣದ ಕೊರತೆ ಏನು ಎಂಬುದರ ಬಗ್ಗೆ ಚೆನ್ನಾಗಿ ಅರಿವು ಇದೆ. ಆದರೆ ಆ ಕೊರತೆಗಳನ್ನು ನೀಗಿಸುವ ಇಚ್ಛಾಶಕ್ತಿ ಇಲ್ಲ. ಹಾಗಾಗಿ ಜಿಲ್ಲೆಯ ಪ್ರವಾಸೋದ್ಯಮ ಸೊರಗುತ್ತಿವೆ.
-ಅಶೋಕ್, ಸುರತ್ಕಲ್
ಸಸಿಹಿತ್ಲು ಬೀಚ್ ಸರ್ಫೀಂಗ್ ಜಲಕ್ರೀಡೆಗೆ ಪ್ರಶಸ್ತವಾದುದು. ಆದರೆ ಅದನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದೆಯೇ ವಿನ: ಕಾರ್ಯರೂಪಕ್ಕೆ ಬರುತ್ತಿಲ್ಲ. ಮೂರೂವರೆ ವರ್ಷದ ಹಿಂದೆ ಜಿಲ್ಲೆಯ ನಾಲ್ಕು ಮಂದಿ ಸಚಿವರು ಹೇಳಿದಂತೆ ನಡೆದಿದ್ದರೆ ಇಂದು ದ.ಕ. ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿತ್ತು. ಗಲ್ಲಿ ಗಲ್ಲಿಯ ಡಾಂಬರು ರಸ್ತೆಗಳನ್ನು ಅಗೆದು ಕಾಂಕ್ರಿಟೀಕರಣ ರಸ್ತೆ ಮಾಡಲಾಗುತ್ತಿದೆಯೇ ವಿನ: ಪ್ರವಾಸೋದ್ಯಮದಂತಹ ಕ್ಷೇತ್ರದತ್ತ ಯಾರೂ ಆಸಕ್ತಿ ವಹಿಸುತ್ತಿಲ್ಲ.
-ದಿನೇಶ್ ಮಂಗಳೂರು
ಉಳ್ಳಾಲ ಸೇತುವೆ ಸಮೀಪದ ಆಡಂಕುದ್ರು (ನದಿಯ ಮಧ್ಯೆ ಇರುವ ದ್ವೀಪ) ಪ್ರದೇಶವನ್ನು ಬಿಜೆಪಿ ಸರಕಾರವಿದ್ದಾಗ ಅಭಿವೃದ್ಧಿ ಪಡಿಸುವ ಬಗ್ಗೆ ಮಾತು ಕೇಳಿ ಬಂದಿತ್ತು. ಆ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಅತ್ತ ಗಮನ ಹರಿಸಲೇ ಇಲ್ಲ. ಪ್ರತಿವರ್ಷ ನಡೆಸುವ ಕರಾವಳಿ ಉತ್ಸವ ಕೂಡ ಕಾಟಾಚಾರಕ್ಕೆ ನಡೆಯುತ್ತಿವೆ. ಈ ಉತ್ಸವವನ್ನೂ ಕೂಡ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವಂತಹ ಅಗತ್ಯವಿದೆ.
-ಸ್ಟೀಫನ್ ತೊಕ್ಕೊಟ್ಟು
14ರಂದು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಸಂವಾದ ಕೂಟ
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಮತ್ತು ಕೆನರಾ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಜಂಟಿ ಆಶ್ರಯದಲ್ಲಿ ಡಿ.14ರಂದು ಪೂರ್ವಾಹ್ನ 11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ 2ನೆ ಮಹಡಿಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ/ಸಲಹೆ-ಸೂಚನೆಗಳನ್ನು ಪಡೆಯಲು ಸಂವಾದ ಕೂಟ ಏರ್ಪಡಿಸಲಾಗಿದೆ.
ಜಿಲ್ಲೆಯ ಬೀಚ್ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಧಾರ್ಮಿಕ ಮತ್ತು ಪ್ರಾಚ್ಯ ಪ್ರವಾಸೋದ್ಯಮ, ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ, ವಸ್ತು ಪ್ರದರ್ಶನಗಳ (ಎಂ.ಐ.ಸಿ.ಇ) ಪ್ರವಾಸೋದ್ಯಮ, ಸಮುದ್ರ ಪ್ರವಾಸೋದ್ಯಮ, ಪ್ರವಾಸಿ ಮನೆ ವಾಸ್ತವ್ಯ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡಬಹುದಾಗಿದೆ.







