ವಾರ್ದಾ: ಸಂತ್ರಸ್ತ ಚೆನ್ನೈ ಸಾಮಾನ್ಯ ಸ್ಥಿತಿಗೆ
ಚೆನ್ನೈ, ಡಿ.13: ವಾರ್ದಾ ಚಂಡಮಾರುತ ಚೆನ್ನೈಯನ್ನು ಅಪ್ಪಳಿಸಿದ ಒಂದು ದಿನದ ಬಳಿಕ ನಗರದಲ್ಲಿ ಉರುಳಿರುವ ಮರಗಳು, ಒಡೆದು ಬಿದ್ದಿರುವ ಜಾಹೀರಾತು ಫಲಕಗಳು, ಕಡಿದು ಬಿದ್ದಿರುವ ದೂರವಾಣಿ, ವಿದ್ಯುತ್ ತಂತಿಗಳು ಹಾಗೂ ತಗ್ಗಿನ ಪ್ರದೇಶಗಳು ಜಲಾವೃತವಾಗಿರುವ ದೃಶ್ಯ ಕಂಡು ಬರುತ್ತಿದೆ.
ವಿಮಾನಯಾನ ಇಂದು ಮುಂಜಾನೆ ಆರಂಭಗೊಂಡಿದ್ದು, ನಗರದ ಜನಜೀವನ ಸಾಮಾನ್ಯದತ್ತ ಮರಳಲಾರಂಭಿಸಿದೆ. ಇಂದು ಮಳೆ ಕಡಿಮೆಯಾದುದರಿಂದ ಜನರು ಮನೆಗಳಿಂದ ಹೊರ ಬಂದಿದ್ದು, ರಸ್ತೆ ಬದಿಯ ಚಹಾದಂಗಡಿಗಳ ಮುಂದೆ ಸಾಲುಗಟ್ಟಿರುವುದು ಕಾಣಿಸುತ್ತಿತ್ತು. ಬಸ್ಸು ಹಾಗೂ ರೈಲು ಸಂಚಾರ ಭಾಗಶಃ ಆರಂಭವಾಗಿದ್ದು ಕಚೇರಿಗಳಿಗೆ ಹೋಗುವವರು ಬಸ್ಸು ತಂಗುದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಕಾಯುತ್ತಿದ್ದರು.
ಎಂಎಂಸಿ ಹಾಗೂ ಸುಲೂರ್‌ಪೇಟ್ಟಾ, ಅರಕ್ಕೋಣಂ ವಲಯದಲ್ಲಿ ಕೆಲವು ರೈಲುಗಳು ಸಂಚಾರ ಆರಂಭಿಸಿವೆ. ಆದರೆ, ಜನನಿಬಿಡ ತಾಂಬರಂ-ಚೆಂಗಲ್ಪಟ್ಟು ಮಾರ್ಗದಲ್ಲಿ ರೈಲು ಓಡಾಟ ಇನ್ನಷ್ಟೇ ಆರಂಭವಾಗಬೇಕಿದೆಯೆಂದು ದಕ್ಷಿಣ ರೈಲ್ವೆ ತಿಳಿಸಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಮಾನತುಗೊಳಿಸಲಾಗಿದ್ದ ವಿಮಾನ ಸಂಚಾರ ಆರಂಭವಾಗಿದೆ.
ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇನ್ನಷ್ಟೇ ಸರಿಪಡಿಸಬೇಕಿದೆ. ತಂತಿಗಳ ಮೇಲೆ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸರಕಾರಿ ಯಂತ್ರಾಂಗ ಹಾಗೂ ನಾಗರಿಕರು ಮರ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ. ಜನರು ಅಂಗಡಿ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಖರೀದಿಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಮೇಣದ ಬತ್ತಿಗಳು ಬಿಸಿ ದೋಸೆಗಳಂತೆ ಮಾರಾಟವಾಗುತ್ತಿವೆ.
ಕಾಂಚೀಪುರಂ, ತಿರುವಳ್ಳೂರು ಹಾಗೂ ಚೆನ್ನೈಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದು ವರದಿಯಾಗಿದ್ದು, ಅದನ್ನು ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಈ ವರೆಗೆ ಕಂಡರಿಯದ ಚಂಡಮಾರುತದ ಪ್ರಭಾವದಿಂದ ಜನರು ನಿಧಾನವಾಗಿ ಹೊರ ಬರತೊಡಗಿದ್ದಾರೆ.





