ಆರೋಪಿಸಿದವರಿಗೆ ಚಪ್ಪಲಿಯೇಟು: ರಿಜಿಜು ಬೆದರಿಕೆ
450 ಕೋ.ರೂ. ಹಗರಣದಲ್ಲಿ ಸಚಿವ ರಿಜಿಜು: ಆರೋಪ
ಹೊಸದಿಲ್ಲಿ,ಡಿ.13: ತನ್ನ ತವರು ರಾಜ್ಯ ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಯಲ್ಲಿ 450 ಕೋ.ರೂ.ಗಳ ಹಗರಣದಲ್ಲಿ ತನ್ನ ಕೈವಾಡವಿದೆ ಎಂಬ ಆರೋಪವನ್ನು ಕೇಂದ್ರ ಸಹಾಯಕ ಗೃಹ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಎದುರಿಸುತ್ತಿದ್ದಾರೆ. ರಿಜಿಜು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ತನ್ನ ಬಳಿ ಆಡಿಯೋ ಸಾಕ್ಷಾಧಾರವಿದೆ ಎಂದು ಮಂಗಳವಾರ ಹೇಳಿರುವ ಪ್ರತಿಪಕ್ಷ ಕಾಂಗ್ರೆಸ್, ಅವರ ರಾಜೀನಾಮೆಗೆ ಆಗ್ರಹಿಸಿದೆ. ಇದಕ್ಕೂ ಮುನ್ನ ಬೆಳಗ್ಗೆ ತನ್ನ ವಿರುದ್ಧದ ಆರೋಪವನ್ನು ಬಲವಾಗಿ ನಿರಾಕರಿಸಿದ ರಿಜಿಜು, ಇದು ನಾಚಿಕೆಗೇಡಿನ ವಿಷಯ. ಈ ಸುಳ್ಳುಸುದ್ದಿಯನ್ನು ಸೃಷ್ಟಿಸಿದವರು ನಮ್ಮಲ್ಲಿಗೆ ಬಂದರೆ ಅವರಿಗೆ ಚಪ್ಪಲಿ ಏಟುಗಳ ಸ್ವಾಗತ ದೊರೆಯಲಿದೆ. ನಾವು ಬುಡಕಟ್ಟು ಜನರಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ಭ್ರಷ್ಟಾಚಾರವೆನ್ನುವುದೇ ಎಂದು ಪ್ರಶ್ನಿಸಿದರು.
ರಿಜಿಜು ಅವರ ಮತಕ್ಷೇತ್ರದಲ್ಲಿ ಜಲ ವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಲು ಉದ್ದೇಶಿತ ಸ್ಥಳದಿಂದ ದೊಡ್ಡ ದೊಡ್ಡ ಕಲ್ಲುಗಳು ಮತ್ತು ಬಂಡೆಗಳನ್ನು ಲಾರಿಗಳಲ್ಲಿ ಸಾಗಿಸಲು ಉತ್ಪ್ರೇಕ್ಷಿತ ಮತ್ತು ನಕಲಿ ಬಿಲ್‌ಗಳನ್ನು ಸರಕಾರವು ಪಾವತಿಸಿದೆ ಎಂದು ಆರೋಪಿಸಲಾಗಿದೆ. ರಿಜಿಜು ಅವರ ಸಂಬಂಧಿ ಗೊಬೊಯ್ ರಿಜಿಜು ಈ ಯೋಜನೆಯಲ್ಲಿ ಉಪ ಗುತ್ತಿಗೆದಾರರಾಗಿದ್ದಾರೆ. ಈ ಬಿಲ್‌ಗಳಿಗೆ ಹಣ ಪಾವತಿ ಯಾಗುವಂತೆ ರಿಜಿಜು ತನ್ನ ಪ್ರಭಾವವನ್ನು ಬೀರಿದ್ದಾರೆ ಎನ್ನುವುದು ಆರೋಪದ ಮುಖ್ಯ ತಿರುಳು.
ಬೃಹತ್ ಜಲ ವಿದ್ಯುತ್ ಯೋಜನೆಗಾಗಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವ ಸರಕಾರಿ ಸ್ವಾಮ್ಯದ ಈಶಾನ್ಯ ಭಾರತ ವಿದ್ಯುಚ್ಛಕ್ತಿ ನಿಗಮದ ಜಾಗ್ರತ ಅಧಿಕಾರಿ ಸತೀಶ ವರ್ಮಾ ತನ್ನ ವರದಿಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಮೊದಲ ಬಾರಿಗೆ ಮಾಡಿದ್ದರು. ನಕಲಿ ಮತು ಉತ್ಪ್ರೇಕ್ಷಿತ ಬಿಲ್‌ಗಳಿಂದಾಗಿ ಸರಕಾರವು 450 ಕೋ.ರೂ.ಗಳ ನಷ್ಟವನ್ನು ಅನುಭವಿಸಬೇಕಾದ ಅಪಾಯವಿದೆ ಎಂದು ಅವರು ಹೇಳಿದ್ದರು.
2015, ಡಿಸೆಂಬರ್‌ನಲ್ಲಿ ಗೊಬೊಯ್ ಮತ್ತು ವರ್ಮಾ ನಡುವಿನ ಮಾತುಕತೆಯ ಸಿಡಿ ತನ್ನ ಬಳಿ ಇದೆ ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ಗೊಬೊಯ್ ವರ್ಮಾಗೆ ಹೇಳಿದ್ದರು. ಇದಾದ ವಾರಗಳ ಬಳಿಕ ಅರುಣಾಚಲ ಪ್ರದೇಶದ ಕಾಂಗ್ರೆಸ್ ಸರಕಾರ ಉರುಳಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಸರಕಾರವನ್ನು ಉರುಳಿಸಲಿದೆ ಎನ್ನುವುದು ಗೊಬೊಯ್‌ಗೆ ಮೊದಲೇ ಗೊತ್ತಿತ್ತು ಎಂದೂ ಕಾಂಗ್ರೆಸ್ ಆರೋಪಿಸಿದೆ.







