ಸಹಕಾರಿ ಸಂಘಗಳಿಗಾದ ಅನ್ಯಾಯದ ವಿರುದ್ಧ ಹೋರಾಟ: ರಾಜೇಂದ್ರ ಕುಮಾರ್
ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಹಕಾರಿ ಸಂಘಗಳ ಸಭೆ

ಮಂಗಳೂರು, ಡಿ.13: ಚಾಲ್ತಿ ಖಾತೆದಾರ ತನ್ನ ಖಾತೆಯಿಂದ ಪಡೆಯುವಷ್ಟೇ ಹಣದ ಪ್ರಮಾಣವನ್ನು ಸಹಕಾರಿ ಸಂಘಗಳಿಗೂ ಅನ್ವಯಿಸಿದ ಕೇಂದ್ರ ಸರಕಾರ ಮತ್ತು ಆರ್‌ಬಿಐ ನಿಲುವಿನ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ನೋಟು ಅಮಾನ್ಯದ ಬಳಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಹಿತ ಇತರ ಸೊಸೈಟಿಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಸಂಘಗಳ ಅಧ್ಯಕ್ಷರು-ಕಾರ್ಯನಿರ್ವಹಣಾಧಿಕಾರಿಗಳ ಅಹವಾಲು ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಹಕಾರಿ ಸಂಘಗಳು ರಾಜ್ಯ ಸಹಕಾರಿ ಇಲಾಖೆಯಡಿ ನೋಂದಣಿಗೊಂಡಿವೆ. ಆದರೆ ಆರ್‌ಬಿಐಯಲ್ಲಿ ನೋಂದಣಿಗೊಳ್ಳದ ಕಾರಣ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ನೋಟಿನ ಕುರಿತು ಕೇಂದ್ರ ಸರಕಾರದ ನಿಲುವಿನಿಂದ ಸಹಕಾರಿ ಕ್ಷೇತ್ರದ ಪರಿಸ್ಥಿತಿ ಚಿಂತಾಜನಕವಾಗಿದೆ. ಸಹಕಾರಿ ಕ್ಷೇತ್ರವನ್ನೇ ನಂಬಿರುವ ರೈತ ಕುಟುಂಬಗಳು ಆತಂಕಕ್ಕೀಡಾಗಿವೆ. ನ.8ರ ಬಳಿಕ ಸಹಕಾರಿ ಸಂಘ, ಸೊಸೈಟಿಗಳಿಗೆ ಹಣ ಹರಿದು ಬರುತ್ತಿಲ್ಲ. ವ್ಯವಹಾರ ಭಾಗಶಃ ಸ್ಥಗಿತಗೊಂಡಿದ್ದು, ಇದರಿಂದ ತಾವು ಜಮೆ ಮಾಡಿದ ಹಣವನ್ನು ಪಡೆಯಲು ಗ್ರಾಹಕರಿಗೆ ಅಸಾಧ್ಯವಾಗಿದೆ. ಹೀಗೆ ಮುಂದುವರಿದರೆ ಗ್ರಾಹಕರು ಸಂಘಗಳ ಮೇಲಿಟ್ಟ ನಂಬಿಕೆ ಹುಸಿಯಾಗುವ ಅಪಾಯವಿದ್ದು, ಸಹಕಾರಿ ಸಂಘಗಳಿಗೆ ಹೊಸ ಸಾಲ ನೀಡಲೂ ಆಗದೆ, ಗ್ರಾಹಕ ಸಂಘಗಳಿಗೆ ಹಣ ಮರುಪಾವತಿಸಲೂ ಆಗದ ಸ್ಥಿತಿಯಿದೆ. ಮಾರ್ಚ್ ವೇಳೆಗೆ ಸಾಲ ಮರುಪಾವತಿಯಾಗದಿದ್ದರೆ ಸಂಘಗಳು ನಷ್ಟ ಅನುಭವಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡುವ ಅಗತ್ಯವಿದೆ ಎಂದು ರಾಜೇಂದ್ರ ಕುಮಾರ್ ಹೇಳಿದರು.
ಚಾಲ್ತಿ ಖಾತೆಯ(ಕರೆಂಟ್ ಅಕೌಂಟ್)ವ್ಯಕ್ತಿ ಹಣ ಡ್ರಾ ಮಾಡುವಷ್ಟೇ ಮಿತಿಯನ್ನು ಸಂಘಗಳಿಗೆ ನೀಡಿದ್ದು ಸರಿಯಲ್ಲ. ಸಹಕಾರಿ ಸಂಘಗಳನ್ನು ಆರ್‌ಬಿಐ ತನ್ನ ಕಕ್ಷೆಯೊಳಗೆ ಸೇರಿಸಲು ಒತ್ತಡ ಹೇರುವ ಅನಿವಾರ್ಯತೆ ಇದೆ ಎಂದ ರಾಜೇಂದ್ರ ಕುಮಾರ್, ಪಡಿತರ ವಿತರಣೆ ಮಾಡುವ ಸಂಘಗಳಿಗೆ ಅಧಿಕ ಕಮಿಷನ್ ನೀಡಲು ರಾಜ್ಯ ಆಹಾರ ಸಚಿವರಿಗೆ ಮನವಿ ಮಾಡಬೇಕಿದೆ. ಸ್ಪರ್ಧಾತ್ಮಕ ಯುಗದ ಜೊತೆ ಹೆಜ್ಜೆ ಹಾಕಲು ಸಹಕಾರಿ ಸಂಘಗಳು ಬದ್ಧವಾಗಿದೆ. ನಗದು ರಹಿತ ವಹಿವಾಟು ಅಸಾಧ್ಯವೇನಲ್ಲ. ಆದರೆ ಅದಕ್ಕೆ ಕಾಲಮಿತಿ ಬೇಕು. ಗ್ರಾಹಕರು ಕೂಡ ಅದರತ್ತ ಒಲವು ತೋರುವವರೆಗೆ ಕಾಯಬೇಕಿದೆ ಎಂದರು.
ಎಲ್ಲ ಸೊಸೈಟಿ, ಸಹಕಾರಿ ಬ್ಯಾಂಕ್‌ಗಳಲ್ಲಿ ನೋಟ್ ಕೌಂಟಿಂಗ್ ಮೆಶಿನ್ ಇದೆ. ಸ್ವೈಪ್ ಮಿಶಿನ್‌ನ ಅಗತ್ಯವಿದೆ. ಏಕರೂಪ ಸಾಫ್ಟ್ ವೇರ್ ರೂಪಿಸಿದರೆ ವಹಿವಾಟು ಸುಲಭ ವಾಗಲಿದೆ ಎಂದು ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
*ಆತಂಕ ವ್ಯಕ್ತಪಡಿಸಿದ ಸಂಘಗಳ ಅಧ್ಯಕ್ಷರು:
ಸಭೆಯಲ್ಲಿದ್ದ ಬಹುತೇಕ ಸಹಕಾರಿ ಸಂಘಗಳ ಅಧ್ಯಕ್ಷರು- ಕಾರ್ಯನಿರ್ವಹಣಾಧಿಕಾರಿಗಳು ನೋಟು ಅಮಾನ್ಯದ ಬಳಿಕ ತಲೆದೋರಿದ ವಿದ್ಯಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿ ನಿಂತು ಕಾನೂನು ಹೋರಾಟಕ್ಕೆ ಧುಮುಕಬೇಕು ಎಂದು ಒತ್ತಾಯಿಸಿದರು. ಗ್ರಾಹಕರು ತಮ್ಮ ಠೇವಣಿ ಮರಳಿ ಕೇಳಿದಾಗ ಕೊಡಲು ಹಣವಿಲ್ಲ. ಡಿ.31ರ ಬಳಿಕವೂ ಹೀಗಾದರೆ ಏನಾಗಬಹುದು ಎಂಬ ಆತಂಕವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಅಸಾಧ್ಯ. ಹಾಗಾಗಿ ಜನಪ್ರತಿನಿಧಿಗಳೊಂದಿಗೆ ಸೇರಿ ಹೋರಾಟ ಮಾಡುವ ಅಗತ್ಯವಿದೆ. ಕೇಂದ್ರದ ನಿಲುವಿನಿಂದ ಸಹಕಾರಿ ಸೊಸೈಟಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಈ ಕುರಿತು ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.
ಕ್ಯಾಶ್‌ಲೆಸ್ ವ್ಯವಹಾರ ನಡೆಸುವ ಮುನ್ನ ಸಿಬ್ಬಂದಿ ವರ್ಗಕ್ಕೆ ಸೂಕ್ತ ತರಬೇತಿಯನ್ನು ನೀಡಬೇಕು ಎಂದು ತಿಮ್ಮಪ್ಪ ಪೂಜಾರಿ ಆಗ್ರಹಿಸಿದರು. ಸುಮಾರು 38 ಸಾವಿರ ಹೈನುಗಾರರಿಗೆ ಸಕಾಲದಲ್ಲಿ ಹಣ ಸಿಗುತ್ತಿಲ್ಲ. ಗ್ರಾಹಕರು ರಾಷ್ಟ್ರೀಕೃತ ಬ್ಯಾಂಕ್‌ನತ್ತ ಮುಖ ಹಾಕುತ್ತಿದ್ದಾರೆ. ಪಿಗ್ಮಿ ಸಂಗ್ರಹದಲ್ಲೂ ಶೇ.30ರಷ್ಟು ಕಡಿಮೆಯಾಗಿದ್ದು, ಇತರ ಬ್ಯಾಂಕ್‌ಗಳಿಗೆ ನೀಡುವಷ್ಟೇ ಮಾನ್ಯತೆಯನ್ನು ಸಹಕಾರಿ ಸಂಘಗಳಿಗೆ ನೀಡಲು ಆರ್‌ಬಿಐ ಮುಂದಾಗಬೇಕು. ಇಲ್ಲದಿದ್ದರೆ ಸೊಸೈಟಿಗಳ ವ್ಯವಹಾರ ಹಳಿ ತಪ್ಪಬಹುದು ಎಂದು ಎಂ.ಎಸ್.ಗೋಖಲೆ ಅಭಿಪ್ರಾಯಪಟ್ಟರು.
ನೋಟು ಅಮಾನ್ಯದಿಂದ ಸೊಸೈಟಿಗಳ ಆತ್ಮಸ್ಥೈರ್ಯ ಕುಸಿದಿದೆ. ಆರ್‌ಬಿಐ ಸಹಕಾರಿ ಬ್ಯಾಂಕ್‌ಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದನೀಯ. ಇದರಿಂದಾದ ಆರ್ಥಿಕ ನಷ್ಟ, ಅನ್ಯಾಯದ ಬಗ್ಗೆ ಆರ್‌ಬಿಐ ಮತ್ತು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಳ್ಳಲು ನಿಯೋಗವೊಂದು ತೆರಳುವ ಅಗತ್ಯವಿದೆ ಎಂದು ವಸಂತ್ ಮಜಲ್ ಹೇಳಿದರು.
ಕೇಂದ್ರ ಸರಕಾರದ ನೋಟು ಅಮಾನ್ಯವು ದಿಟ್ಟ ಹೆಜ್ಜೆಯಾಗಿದೆ. ಸಹಕಾರಿ ಸಂಘಗಳು ಪಾನ್‌ಕಾರ್ಡ್ ಅಭಿಯಾನ ನಡೆಸಬೇಕು. ಅಲ್ಲಲ್ಲಿ ಗ್ರಾಹಕರ ಸಭೆ ಕರೆದು ಧೈರ್ಯ ತುಂಬಬೇಕು. ಇಂಟರ್‌ನೆಟ್ ಬ್ಯಾಂಕ್‌ಗೆ ಒಲವು ಮೂಡಿಸಬೇಕು. ಕೃಷಿ ಪತ್ತಿನ ಪ್ರಾಥಮಿಕ ಸೊಸೈಟಿಗಳಿಗೂ ಐಎಫ್‌ಎಸ್‌ಸಿ ಕೋಡ್ ನೀಡುವಂತೆ ಹೋರಾಟ ಮಾಡಬೇಕು ಎಂದು ಬಾಲಚಂದ್ರ ಆಗ್ರಹಿಸಿದರು.
ಜಿ. ಆನಂದ, ರಮೇಶ್ ಭಟ್ ಉಪ್ಪಂಗಳ, ಹರೀಶ್ ಬಾರಡ್ಕ, ಪಿ.ಎಲ್.ಜೋಶ್, ಜಯರಾಂ, ಸುಬ್ರಹ್ಮಣ್ಯ ಭಟ್ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ
ಮಧ್ಯ ಪ್ರವೇಶಕ್ಕೆ ಆಗ್ರಹ
ಸಹಕಾರ ಸಂಘಗಳು ಎದುರಿಸುವ ಸಮಸ್ಯೆಯಿಂದ ಪಾರು ಮಾಡಲು ರಾಜ್ಯ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ವ್ಯವಹರಿಸಬೇಕು. ಕೃಷಿ ಸಾಲಗಳ ಮರುಪಾವತಿ ಅವಧಿಯನ್ನು ಸಮಸ್ಯೆ ಪರಿಹಾರವಾಗುವರೆಗೆ ಮುಂದೂಡಿ ಆದೇಶ ಹೊರಡಿಸಬೇಕು. ರಾಜ್ಯ ಸರಕಾರ ನೀಡುತ್ತಿರುವ ಬಡ್ಡಿ ಸಹಾಯಧನಗಳನ್ನು ಪ್ರತಿ ತ್ರೈಮಾಸಿಕದ ಬಡ್ಡಿ ಬಿಲ್ಲು ಸಲ್ಲಿಕೆಯಾದ ತಕ್ಷಣ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಎಸ್‌ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ನಿರ್ದೇಶಕರಾದ ಬಿ. ನಿರಂಜನ್, ರಾಜರಾಮ್ ಭಟ್, ವಾದಿರಾಜ್ ಶೆಟ್ಟಿ ಎಂ., ಭಾಸ್ಕರ ಕೋಟ್ಯಾನ್, ದೇವರಾಜ್ ಕೆ.ಎಸ್., ರಾಜು ಪೂಜಾರಿ, ಸದಾಶಿವ ಉಳ್ಳಾಲ್, ಶಶಿಕುಮಾರ್ ರೈ, ಜಯರಾಮ ರೈ, ಸಿಇಒ ಸತೀಶ್ ಎಸ್., ಸಲಹೆಗಾರ ಎ.ಎಸ್. ಹಿಮವಂತ್ ಗೋಪಾಲ್ ಉಪಸ್ಥಿತರಿದ್ದರು.







