ಬಸ್ ಢಿಕ್ಕಿ: ಓರ್ವನಿಗೆ ಗಾಯ; ಗೂಡಂಗಡಿ ಧ್ವಂಸ

ವಿಟ್ಲ, ಡಿ.13: ಖಾಸಗಿ ಬಸ್ಸೊಂದು ಲಾರಿ ಹಾಗೂ ಗೂಡಂಗಡಿಗೆ ಢಿಕ್ಕಿ ಹೊಡೆದ ಪರಿಣಾಮ ಗೂಡಂಗಡಿ ಧ್ವಂಸಗೊಂಡು ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಇಳಂತಿಲ ನಿವಾಸಿ ರಾಮಕೃಷ್ಣ(34) ಎಂಬವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಮಾಣಿ ಜಂಕ್ಷನ್‌ನಲ್ಲಿ ನಿಂತಿದ್ದ ಲಾರಿ ದಿಢೀರನೆ ರಸ್ತೆಗೆ ಚಲಿಸಿದ ಪರಿಣಾಮ ಬಸ್ ಚಾಲಕ ನಿಯಂತ್ರಣ ಕಳೆದು ಲಾರಿಯ ಬಾಗಿಲಿಗೆ ಬಡಿದು ಬಳಿಕ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗೆ ಢಿಕ್ಕಿ ಹೊಡೆದು ಗೂಡಂಗಡಿಯನ್ನು ಎಳೆದುಕೊಂಡು ಹೋಗಿ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಗೂಡಂಗಡಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗ ಜಖಂಗೊಂಡಿದೆ. ಗೂಡಂಗಡಿ ಯಾಕುಬ್ ಎಂಬವರಿಗೆ ಸೇರಿದ್ದಾಗಿದ್ದು, ಅವರು ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗೆ ಇಲ್ಲಿ ಚಹಾ ಮಾರಾಟ ಮಾಡುತ್ತಿದ್ದರು. ಈ ಘಟನೆ ನಡೆಯುವುದಕ್ಕಿಂತ 10 ನಿಮಿಷ ಮೊದಲು ಇಲ್ಲಿಂದ ತೆರಳಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಅದಲ್ಲದೆ 9 ಗಂಟೆ ಸುಮಾರಿಗೆ ಗೂಡಂಗಡಿ ಸಮೀಪ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದರು ಎನ್ನಲಾಗಿದ್ದು, ಮೊದಲೇ ಈ ಘಟನೆ ನಡೆದಿದ್ದರಿಂದ ಭಾರೀ ದುರಂತವೊಂದು ತಪ್ಪಿದೆ.





