ಕೇಜ್ರಿವಾಲ್ ಗೆ ಶಕ್ತಿ ತುಂಬಿದ ಸುಪ್ರೀಂ ಕೋರ್ಟ್ ಹೇಳಿಕೆ

ಹೊಸದಿಲ್ಲಿ, ಡಿ.14: ‘‘ಚುನಾಯಿತ ಸರಕಾರವೊಂದಕ್ಕೆ ಆಡಳಿತ ನಡೆಸಲು ಸ್ವಲ್ಪವಾದರೂಅಧಿಕಾರದ ಅಗತ್ಯವಿದೆ, ಇಲ್ಲದೇ ಹೋದಲ್ಲಿಸರಕಾರಕ್ಕೆ ಕಾರ್ಯನಿರ್ವಹಿಸುವುದು ಅಸಾಧ್ಯವಾಗುತ್ತದೆ’’ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಇಂದು ಅಭಿಪ್ರಾಯ ವ್ಯಕ್ತಪಡಿಸುವುದರ ಮುಖಾಂತರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸ್ವಲ್ಪ ಮಟ್ಟಿನ ಶಕ್ತಿ ತುಂಬಿದ್ದಾರೆ. ಅದಕ್ಕೆ ಕಾರಣವೂ ಇದೆ. ಕೇಂದ್ರ ಸರಕಾರ ತಮ್ಮ ದಿಲ್ಲಿ ಸರಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದೆಯೆಂಬ ದೂರನ್ನು ಕೇಜ್ರಿವಾಲ್ ಸದಾ ಮಾಡುತ್ತಿರುತ್ತಾರೆ.
ಫೆಬ್ರವರಿ 2015ರಲ್ಲಿ ನಡೆದ ದಿಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ವಿಜಯಿಯಾಗುವ ಮೂಲಕ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಇತಿಹಾಸ ಸೃಷ್ಟಿಸಿತ್ತು. ಆದರೆ ಅಂದಿನಿಂದ ಅವರ ಸರಕಾರ ಹಾಗೂ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಮಧ್ಯೆ ಜಂಗಿ ಕುಸ್ತಿ ನಡೆಯುತ್ತಲೇ ಇತ್ತು. ತಮ್ಮ ಸರಕಾರ ತೆಗೆದುಕೊಳ್ಳುವ ಪ್ರತಿ ಮಹತ್ವದ ಕ್ರಮಗಳನ್ನು ಹಾಗೂ ನಿರ್ಧಾರಗಳನ್ನು ಲೆಫ್ಟಿನೆಂಟ್ ಗವರ್ನರ್ ಅವರು ತಿರಸ್ಕರಿಸುತ್ತಿದ್ದಾರೆ ಹಾಗೂ ಅವರು ಪ್ರಧಾನಿ ನರೇಂದ್ರ ಮೋದಿಯ ಏಜಂಟರಂತೆ ವರ್ತಿಸುತ್ತಿದ್ದಾರೆಂದು ಕೇಜ್ರಿವಾಲ್ ಸದಾ ಆರೋಪಿಸುತ್ತಾ ಬಂದಿದ್ದಾರೆ.
ಆದರೆ ದಿಲ್ಲಿ ಒಂದು ರಾಜ್ಯವಲ್ಲದೇ ಇರುವುದರಿಂದ ಲೆಫ್ಟಿನೆಂಟ್ ಗವರ್ನರ್ ಅವರಿಗೆ ವಿಶೇಷಾಧಿಕಾರವಿದೆಯೆಂಬ ಕೇಂದ್ರದ ವಾದವನ್ನು ದಿಲ್ಲಿ ಹೈಕೋರ್ಟ್ ಕೂಡ ಒಪ್ಪಿ ಕೇಜ್ರಿವಾಲ್ ವಿರುದ್ಧ ತೀರ್ಪು ನೀಡಿತ್ತು. ರಾಜಧಾನಿಯ ಆಡಳಿತಾತ್ಮಕ ಮುಖ್ಯಸ್ಥರಾಗಿರುವ ಜಂಗ್ ಅವರು ಸರಕಾರದ ನಿರ್ಧಾರಗಳಿಗೆ ಅಂಕಿತ ನೀಡುವ ಯಾ ತಿರಸ್ಕರಿಸುವ ಅಧಿಕಾರ ಹೊಂದಿದ್ದಾರೆಂದೂ ನ್ಯಾಯಾಲಯ ಹೇಳಿತ್ತು.
ಆದರೆ ಈ ತೀರ್ಪಿನ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ಜನವರಿಯಲ್ಲಿ ನಡೆಯಲಿದೆ.







