ಪ್ರಧಾನಿ ಮೋದಿ ವಿರುದ್ಧ ಸ್ಪೋಟಕ ಆರೋಪ ಮಾಡಿದ ರಾಹುಲ್ ಗಾಂಧಿ

ಹೊಸದಿಲ್ಲಿ,ಡಿ.14: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ತನ್ನ ಬಳಿ ವೈಯಕ್ತಿಕ ಮಾಹಿತಿಯಿದೆ, ಆದರೆ ಆ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ತನಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯವರು ಬುಧವಾರ ಇಲ್ಲಿ ಹೇಳಿದರು.ತನ್ನ ಬಳಿಯಿರುವ ಮಾಹಿತಿಯ ಬಗ್ಗೆ ಅವರು ಯಾವುದೇ ವಿವರಗಳನ್ನು ನೀಡಲಿಲ್ಲ.
5,00 ಮತ್ತು 1,000 ರೂ.ನೋಟುಗಳ ರದ್ದತಿ ಕುರಿತು ರಾಹುಲ್ ಮೋದಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷವು ಸರಕಾರದ ಈ ಕ್ರಮವನ್ನು ಕಟುವಾಗಿ ಟೀಕಿಸಿದೆ. ಆದರೆ ಎಂದೂ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕದ ಪ್ರಧಾನಿಯ ಬಗ್ಗೆ ರಾಹುಲ್ ಇದೇ ಮೊದಲ ಬಾರಿಗೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಬಳಿಯಿರುವ ಮಾಹಿತಿಯ ಬಗ್ಗೆ ಮೋದಿ ಭಯಗೊಂಡಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ತನ್ನ ಬಳಿ ಮಾಹಿತಿಯಿದ್ದು, ಅದನ್ನು ಲೋಕಸಭೆಯಲ್ಲಿ ಬಹಿರಂಗಗೊಳಿಸಲು ಬಯಸಿದ್ದೇನೆ ಎಂದರು.
ನೋಟು ನಿಷೇಧ ಕುರಿತು ಷರತ್ತುರಹಿತ ಚರ್ಚೆಗೆ ಪ್ರತಿಪಕ್ಷವು ಸಿದ್ಧವಿದೆ ಎಂದ ರಾಹುಲ್,‘‘ಸರಕಾರವು ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಮೋದಿ ಕೋಟ್ಯಂತರ ಜನರ ಬದುಕುಗಳನ್ನು ನಾಶ ಮಾಡಿದ್ದಾರೆ. ಮಾತನಾಡುವುದು ನಮ್ಮ ಹಕ್ಕು ಆಗಿದೆ ’’ಎಂದು ಹೇಳಿದರು.







