ನೋಟು ರದ್ದತಿ ಅಕ್ಷಮ್ಯ ತಪ್ಪು: ಎ.ಕೆ ಆ್ಯಂಟನಿ

ಹೊಸದಿಲ್ಲಿ, ಡಿ. 14: ನೋಟು ಅಮಾನ್ಯತೆ ದೇಶ ಎದುರಿಸುತ್ತಿರುವ ರಾಷ್ಟ್ರೀಯ ದುರಂತವಾಗಿದೆ. ಪ್ರಧಾನಿ ಮತ್ತು ಹಣಕಾಸು ಸಚಿವರು ಅಕ್ಷಮ್ಯತಪ್ಪೆಸಗಿದ್ದಾರೆ. ಈ ತಪ್ಪನ್ನು ತಿದ್ದುವವರೆಗೂ ಜನರು ಕ್ಷಮಿಸಲಾರರು ಎಂದು ಆ್ಯಂಟನಿ ಹೇಳಿದ್ದಾರೆ. ಅವರು ನೋಟು ಅಮಾನ್ಯ ಗೊಳಿಸಿದ್ದರಿಂದ ಸಹಕಾರಿ ಕ್ಷೇತ್ರದಲ್ಲಿ ಉದ್ಭವಿಸಿದ ಸಮಸ್ಯೆಯನ್ನು ಪರಿಹರಿಸಬೇಕೆಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಯುಡಿಎಫ್ ನಡೆಸಿದ ಧರಣಿಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಸರಕಾರ ತಪ್ಪು ತಿದ್ದಲಿ. ಆವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರೆಂದು ವರದಿಯಾಗಿದೆ.
ಸರಕಾರ ಬಹುದೊಡ್ಡ ಮೂರ್ಖತನ ತೋರಿಸಿದೆ. ನಂತರ ಅದರಲ್ಲಿ ಹಠಹಿಡಿದಿದೆ. ಎಂದು ಮುಸ್ಲಿಮ್ ಲೀಗ್ ನಾಯಕ ಪಿ.ಕೆ. ಕುಂಞಾಲಿಕುಟ್ಟಿ ಹೇಳಿದ್ದಾರೆ. ಎಟಿಎಂನಲ್ಲಿ ಹಣವಿಲ್ಲ. ಬ್ಯಾಂಕ್‌ಗಳಲ್ಲಿ ಸಂಘರ್ಷ ನಡೆಯುತ್ತಿದೆ. ನೋಟು ಕ್ಷಾಮದಿಂದ ಹೊರರಾಜ್ಯದ ಕಾರ್ಮಿಕರು ಕೂಡಾ ರಾಜ್ಯವನ್ನು ತೊರೆದು ಹೋಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.
ಪಡಿತರ ಅಕ್ಕಿಯನ್ನು ಕಡಿಮೆಗೊಳಿಸಿರುವುದನ್ನು ಮತ್ತೆ ಹೆಚ್ಚಿಸಬೇಕು. ಕೇರಳದೊಂದಿಗೆ ತಾರತಮ್ಯಧೋರಣೆಯನ್ನು ತೊರೆಯಬೇಕೆಂದು ಧರಣಿಯಲ್ಲಿ ಘೋಷಣೆ ಹೊರಟಿದೆ.
ಆಹಾರದ ನಮ್ಮ ಪಾಲು ನೀಡಬೇಕೆಂದು ಧರಣಿಯ ಬಳಿಕ ಯುಡಿಎಫ್ ಪ್ರತಿನಿಧಿಗಳು ಆಹಾರ ಸಚಿವ ರಾಮ್ ವಿಲಾಸ್‌ರನ್ನು ಭೇಟಿಯಾಗಲಿದ್ದಾರೆಂದು ವರದಿ ತಿಳಿಸಿದೆ.







