ಇಲೆಕ್ಟೋರಲ್ ಕಾಲೇಜ್ ಮತದಾರರು ಟ್ರಂಪ್ ಕೈಬಿಡುವರೇ?

ವಾಶಿಂಗ್ಟನ್, ಡಿ. 14: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜೇತರಾಗಿದ್ದಾರೆ ಎಂಬುದಾಗಿ ನವೆಂಬರ್ 8ರಂದು ಘೋಷಿಸಲಾಯಿತು. ಆದಾಗ್ಯೂ, ಅವರ ವಿಜಯವು ಡಿಸೆಂಬರ್ 19ರವರೆಗೆ ಅಧಿಕೃತವಲ್ಲ. ಅಂದು ಅಮೆರಿಕದ ಇಲೆಕ್ಟೋರಲ್ ಕಾಲೇಜ್‌ನ 538 ಸದಸ್ಯರು ಅಮೆರಿಕದಾದ್ಯಂತದ ರಾಜ್ಯಗಳ ರಾಜಧಾನಿಗಳಲ್ಲಿ ಸಭೆ ಸೇರಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಔಪಚಾರಿಕವಾಗಿ ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ.
ಇಲೆಕ್ಟೋರಲ್ ಕಾಲೇಜ್ ಎನ್ನುವುದು ಸಂವಿಧಾನದ ಒಂದು ಮಹತ್ವವಿಲ್ಲದ ಭಾಗ. ವಾಸ್ತವಿಕವಾಗಿ ಅದು ನಿಯೋಜಿತ ಅಧ್ಯಕ್ಷರ ರಬ್ಬರ್ ಸ್ಟಾಂಪ್ ಇದ್ದಂತೆ.
ಆದರೆ, 2016 ಸ್ವಲ್ಪ ಭಿನ್ನವಾಗಿರುವಂತಿದೆ. ವರ್ಷದ ಕೊನೆಯವರೆಗೂ ಅದು ಕುತೂಹಲವನ್ನು ಉಳಿಸಿಕೊಳ್ಳುವತ್ತ ಸಾಗುತ್ತಿದೆ. ಇಲೆಕ್ಟೋರಲ್ ಕಾಲೇಜ್‌ನ ಯಥಾಸ್ಥಿತಿಯನ್ನು ಪ್ರಶ್ನಿಸಲು ಕೆಲವು ಇಲೆಕ್ಟರ್‌ಗಳು ಅಭಿಯಾನವೊಂದರಲ್ಲಿ ತೊಡಗಿದ್ದಾರೆ. ಅವರ ಪ್ರಯತ್ನಗಳಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್‌ರ ತಂಡ ವೌನ ಒಪ್ಪಿಗೆಯನ್ನು ನೀಡಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಸರಕಾರ ಹಸ್ತಕ್ಷೇಪ ನಡೆಸಿರುವುದಕ್ಕೆ ಸಂಬಂಧಿಸಿದ ಪುರಾವೆಯ ಬಗ್ಗೆ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕ ಜೇಮ್ಸ್ ಕ್ಲಾಪರ್‌ರಿಂದ ವಿವರಣೆ ಪಡೆಯಲು ಇಲೆಕ್ಟೋರಲ್ ಕಾಲೇಜ್‌ನ 10 ಮತದಾರರು (ಒಂಬತ್ತು ಮಂದಿ ಡೆಮಾಕ್ರಟ್ ಸದಸ್ಯರು ಮತ್ತು ಒಬ್ಬರು ರಿಪಬ್ಲಿಕನ್ ಸದಸ್ಯರು) ನಿರ್ಧರಿಸಿದ್ದಾರೆ.
ಈ ನಿರ್ಧಾರವನ್ನು ಬೆಂಬಲಿಸುವುದಾಗಿ ಹಿಲರಿ ಪ್ರಚಾರ ಬಣದ ಅಧ್ಯಕ್ಷ ಜಾನ್ ಪೊಡೆಸ್ಟ ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಎರಡು ಪಕ್ಷಗಳ ಇಲೆಕ್ಟರ್‌ಗಳು ಬರೆದ ಪತ್ರವು ನಮ್ಮ ರಾಷ್ಟ್ರೀಯ ಭದ್ರತೆಯನ್ನು ಒಳಗೊಂಡ ಅತ್ಯಂತ ಗಂಭೀರ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ’’ ಎಂದು ಪೊಡೆಸ್ಟ ಹೇಳಿದ್ದಾರೆ.
ಪೊಡೆಸ್ಟ ಸ್ವತಃ ರಶ್ಯನ್ ಸೈಬರ್ ದಾಳಿಯ ಸಂತ್ರಸ್ತರಾಗಿದ್ದಾರೆ.
ಚುನಾವಣೆಯಲ್ಲಿ ಟ್ರಂಪ್‌ಗೆ ನೆರವಾಗುವುದಕ್ಕಾಗಿ ಡೆಮಾಕ್ರಟಿಕ್ ಪಕ್ಷ ಮತ್ತು ಹಿಲರಿ ಅಭಿಯಾನ ಅಧಿಕಾರಿಗಳ ಇಮೇಲ್‌ಗಳ ಮೇಲೆ ರಶ್ಯದ ಕನ್ನಗಾರರು ನಿರ್ದಿಷ್ಟವಾಗಿ ದಾಳಿ ನಡೆಸಿದ್ದಾರೆ ಎಂಬುದನ್ನು ತೋರಿಸುವ ಪುರಾವೆ ಅಮೆರಿಕದ ಗುಪ್ತಚರ ಇಲಾಖೆಯಲ್ಲಿದೆ ಎಂಬ ಅಂಶವನ್ನು ಅವರು ತಮ್ಮ ನಿರ್ಧಾರಕ್ಕೆ ಪುರಾವೆಯನ್ನಾಗಿ ಬಳಸುತ್ತಿದ್ದಾರೆ.
ಆದಾಗ್ಯೂ, ಈ ಇಲೆಕ್ಟರ್‌ಗಳು ಒಟ್ಟು ಸೇರಿ ಡಿಸೆಂಬರ್ 19ರಂದು ಡೊನಾಲ್ಡ್ ಟ್ರಂಪ್‌ರನ್ನು ಕೈಬಿಟ್ಟು ಹಿಲರಿ ಕ್ಲಿಂಟನ್‌ರನ್ನು ಮುಂದಿನ ಅಧ್ಯಕ್ಷೆಯಾಗಿ ಆರಿಸುತ್ತಾರೆ ಎನ್ನುವುದು ಅಗಾಧ ನಿರೀಕ್ಷೆಯಾಗುತ್ತದೆ. ಆದಾಗ್ಯೂ, ತಾನು ಟ್ರಂಪ್‌ಗೆ ಮತ ಹಾಕುವುದಿಲ್ಲ ಎಂಬುದಾಗಿ ಟೆಕ್ಸಾಸ್‌ನ ಓರ್ವ ರಿಪಬ್ಲಿಕನ್ ಇಲೆಕ್ಟರ್ ಕ್ರಿಸ್ ಸಪ್ರನ್ ಹೇಳಿದ್ದಾರೆ. ಆದರೆ, ಸ್ಪರ್ಧೆಯಲ್ಲಿ ಟ್ರಂಪ್ ಹಿಂದುಳಿಯಬೇಕಾದರೆ ಇನ್ನೂ 36 ಮಂದಿ ಅಡ್ಡ ಮತದಾನ ಹಾಕಬೇಕಾಗುತ್ತದೆ.







