ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮದ ಸಮಗ್ರ ಅನುಷ್ಠಾನಕ್ಕೆ ಒತ್ತಾಯ
ಚುನಾಯಿತ ಮಹಿಳಾ ಸದಸ್ಯರಿಗೆ ಕಾರ್ಯಾಗಾರ

ಮುಡಿಪು, ಡಿ.14: ಮಹಾತ್ಮಾ ಗಾಂಧೀಜಿ ಕಲ್ಪನೆಯ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ ಎರಡನೆ ತಿದ್ದುಪಡಿ -2015ರ ಸಮಗ್ರ ಅನುಷ್ಠಾನಕ್ಕೆ ಬಂಟ್ವಾಳ ತಾಲೂಕು ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಒತ್ತಾಯಿಸಿದೆ.
ಜನಶಿಕ್ಷಣ ಟ್ರಸ್ಟ್, ಹಂಗರ್ ಪ್ರಾಜೆಕ್ಟ್‌ನ ಸಹಭಾಗಿತ್ವದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅಧಿನಿಯಮದ ಅನುಷ್ಠಾನದ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತಲ್ಲದೆ ಮಾದರಿ ಗ್ರಾಮ ನಿರ್ಮಾಣದ ಕ್ರಿಯಾ ಯೋಜನೆ ರೂಪಿಸಲಾಯಿತು. ಕಾರ್ಯಾಗಾರದಲ್ಲಿ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ, ಗ್ರಾಮಸಭೆ, ವಾರ್ಡ್‌ಸಭೆಗಳ ಬಲವರ್ಧನೆ, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಉಳಿಸಿ ಬೆಳೆಸಿ ಬಲಪಡಿಸುವುದು, ಬಯಲು ಶೌಚಮುಕ್ತ, ತ್ಯಾಜ್ಯಮುಕ್ತ, ವ್ಯಾಜ್ಯಮುಕ್ತ, ಶೋಷಣೆ ಮುಕ್ತ ಮಾದರಿ ಗ್ರಾಮಗಳ ನಿರ್ಮಾಣದ ಬಗ್ಗೆ ಚಿಂತನ ಮಂಥನ ನಡೆಸಿ ಸಾಮೂಹಿಕ ಸಂಕಲ್ಪಮಾಡಲಾಯಿತು.
ಕಾರ್ಯಾಗಾರದಲ್ಲಿ ಜಿಪಂ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಮಹಾತ್ಮಾ ಗಾಂಧಿ ನರೇಗಾ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಆಯುಷ್ ಇಲಾಖೆಯ ವೈಧ್ಯಾಧಿಕಾರಿ ಶೋಭಾ ರಾಣಿ, ಸುರಿಬೈಲು ಶಾಲಾಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ಅಬೂಬಕರ್, ನರಿಂಗಾನ ಪಿಡಿಒ ನಳಿನಿ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಸ್ಚಚ್ಛ ಮನೆ ಸಾಧಕಿ ಆಲಂಕಾರು ಪ್ರೇಮಾ, ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಪಾಲ್ಗೊಂಡಿದ್ದರು. ಸಂಯೋಜಕಿ ಚಂಚಲಾ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ, ದಿವ್ಯಾ ಸಹಕರಿಸಿದರು.





