ಬಾಹುಬಲಿ 2: ಕ್ರೂರ ಬಲ್ಲಾಳದೇವನಾಗಿ ರಾಣಾ ದಗ್ಗುಬಾಟಿಯ ಮೊದಲ ಪೋಟೊ ಬಹಿರಂಗ

ಹೈದರಾಬಾದ್,ಡಿ.14: ಬಾಕ್ಸ್ ಆಫೀಸನ್ನು ಚಿಂದಿ ಉಡಾಯಿಸದ್ದ ಬಾಹುಬಲಿ ಚಿತ್ರದಲ್ಲಿ ದೊರೆ ಬಲ್ಲಾಳದೇವನಾಗಿ ವಿಜೃಂಭಿಸಿದ್ದ ಖ್ಯಾತ ತೆಲುಗು ನಟ ರಾಣಾ ದಗ್ಗುಬಾಟಿ ಇಂದು 33ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಬಾಹುಬಲಿ 2ರಲ್ಲಿ ರಾಣಾ ಅದೇ ಪಾತ್ರವನ್ನು ನಿರ್ವಹಿಸಿದ್ದು ಈ ಸಂದರ್ಭ ಇದೇ ಮೊದಲ ಬಾರಿಗೆ ಆ ಪಾತ್ರದಲ್ಲಿ ರಾಣಾರ ಫೊಟೊವನ್ನು ನಿರ್ದೇಶಕ ಎಸ್.ಎಸ್.ರಾಜವೌಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.ಈ ಚಿತ್ರದಲ್ಲಿ ರಾಣಾ ಅತ್ಯಂತ ಕ್ರೂರವಾಗಿ ಕಾಣಿಸಿಕೊಂಡಿದ್ದಾರೆ. ಕ್ರೌರ್ಯದ ಪ್ರತೀಕವಾಗಿರುವ ಕಂಗಳು.ಕಪ್ಪುಬಿಳಿ ತಲೆಗೂದಲಿನಲ್ಲಿ ಕ್ರೂರತನವೇ ಮೈವೆತ್ತಿದಂತೆ ಕಾಣಿಸಿಕೊಂಡಿರುವ ರಾಣಾ ನೋಡುಗರ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುತ್ತಾರೆ. ದೊರೆ ಬಲ್ಲಾಳದೇವ ಚಿತ್ರದಲ್ಲಿ ಸಾಕಷ್ಟು ವಿನಾಶಕ್ಕೆ ಕಾರಣನಾಗುತ್ತಾನೆ ಎಂದಿದ್ದಾರೆ ರಾಜವೌಳಿ.
ಬಾಹುಬಲಿ 2 ಚಿತ್ರಕ್ಕಾಗಿ ರಾಣಾ ತನ್ನ ಶರೀರವನ್ನು ಸಾಕಷ್ಟು ದಂಡಿಸಿದ್ದಾರೆ. ಯುವ ಮತ್ತು ವೃದ್ಧ ಬಲ್ಲಾಳನಾಗಿ ಕಾಣಿಸಿಕೊಳ್ಳುವ ಹಂತಗಳಲ್ಲಿ ಅವರು ತನ್ನ ದೇಹತೂಕವನ್ನು 108-110 ಕೆಜಿ ಮತ್ತು 92-94 ಕೆಜಿ ನಡುವೆ ಬಹಳಷ್ಟು ಬಾರಿ ಏರಿಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಹಳಷ್ಟು ಸಾಹಸ ದೃಶ್ಯಗಳಿರಲಿವೆ ಎಂದು ರಾಣಾ ತನ್ನ ಅಭಿಮಾನಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ನಾಯಕ ಪ್ರಭಾಸ್,ರಾಣಾ ಜೊತೆಗೆ ತಮನ್ನಾ ಭಾಟಿಯಾ,ಅನುಷ್ಕಾ ಶೆಟ್ಟಿ ಮತ್ತು ನಾಸರ್ ಅವರೂ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರವು ಮುಂದಿನ ವರ್ಷದ ಎಪ್ರಿಲ್ 28ರಂದು ಬಿಡುಗಡೆಯಾಗಲಿದೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಇತ್ತೀಚಿಗೆ ಸೋರಿಕೆಯಾಗಿತ್ತಾದರೂ, ಸೋರಿಕೆಯ ಹಿಂದಿದ್ದ ವ್ಯಕ್ತಿಗಳನ್ನು ಪೊಲೀಸರು ಶೀಘ್ರವೇ ಬಂಧಿಸಿದ್ದರಿಂದ ಅಂತಹ ದೊಡ್ಡ ನಷ್ಟವೇನೂ ಸಂಭವಿಸಿಲ್ಲ.
250 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬಾಹುಬಲಿ ಈವರೆಗೆ ಸುಮಾರು 600 ಕೋ.ರೂ.ಗಳಿಸಿದೆ.










