ಝೈನೀ ಕಾಮಿಲ್ ಗೆ ಶೈಖ್ ಝಾಹಿದ್ ಸಾಮರಸ್ಯ ಪ್ರಶಸ್ತಿ

ಯು.ಎ.ಇ,ಡಿ.14 : ಭಾಷಣಗಾರ,ಬರಹಗಾರ ಹಾಗೂ ಸುನ್ನೀ ಸಂಘಟನಾ ಪ್ರಮುಖ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಅವರಿಗೆ ಯು.ಎ.ಇ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ನೀಡುವ ಶೈಖ್ ಝಾಹಿದ್ ಸಾಮರಸ್ಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ತನ್ನ ಸಾಮರಸ್ಯ ಭಾಷಣಗಳ ಮೂಲಕ ಜಾತಿ - ಮತ, ಭೇದವಿಲ್ಲದೆ ಎಲ್ಲಾ ವಿಭಾಗದ ಜನರ ಮಧ್ಯೆ ಶಾಂತಿ - ಸೌಹಾರ್ದ ಮತ್ತು ಸಾಮರಸ್ಯವನ್ನು ಸ್ಥಾಪಿಸಲು ಅವರು ನಡೆಸಿದ ಪ್ರಯತ್ನಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಘಟಕವು ಯು.ಎ.ಇ ದೇಶದ 45ನೆ ರಾಷ್ಟ್ರೀಯ ದಿನದ ಪ್ರಯುಕ್ತ ಶಾರ್ಜಾದಲ್ಲಿ ಸಂಘಟಿಸಿದ ಬೃಹತ್ ಸಮಾರಂಭದಲ್ಲಿ ಅಖಿಲ ಭಾರತ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಅರಬಿ ಮುಖಂಡರಾದ ಕರ್ನಲ್ ಯೂಸುಫ್ ಅಲ್ ಖಾನ್ , ಶೇಖ್ ಸಾಲಿಹ್ ಮೂಸಾ, ಹಸನ್ ಅಲ್ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಕ್ಕಿಂಜೆಯಲ್ಲಿ ಜನಿಸಿದ ಝೈನೀ ಅವರು ಧಾರ್ಮಿಕ ರಂಗದಲ್ಲಿ ಝೈನೀ,ಸಖಾಫಿ,ಹಾಗೂ ಕಾಮಿಲ್ ಪದವಿಗಳ ಜತೆ ಮೈಸೂರು ವಿಶ್ವ ವಿದ್ಯಾನಿಲಯದಿಂದ ಎಂ.ಎ ಪದವಿಯನ್ನೂ ಪಡೆದಿದ್ದು.ತನ್ನ ಸೌಹಾರ್ದ ಭಾಷಣಕ್ಕೆ ಪ್ರಸಿದ್ಧರಾಗಿದ್ದಾರೆ.
ಎಸ್ಸೆಸ್ಸಫ್ ಕರ್ನಾಟಕ ರಾಜ್ಯಾಧ್ಯಕ್ಷ, ದಕ್ಷಿಣ ಭಾರತ ಘಟಕಾಧ್ಯಕ್ಷ ಹಾಗೂ ಅಖಿಲ ಭಾರತ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು ಈಗ ಸುನ್ನೀ ಯುವಜನ ಸಂಘ ರಾಜ್ಯ ಕಾರ್ಯದರ್ಶಿಯಾಗಿ, ಪುತ್ತೂರು ಕುಂಬ್ರ ಹಾಗೂ ಮಂಗಳೂರು ಕಾಟಿಪಳ್ಳದಲ್ಲಿರುವ ಮಹಿಳಾ ಕಾಲೇಜುಗಳ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಖುರ್ ಆನ್ ವ್ಯಾಖ್ಯಾನ ಸಮೇತ ಅನೇಕ ಪುಸ್ತಕಗಳನ್ನು ಬರೆದಿರುವ ಅವರು ಮದರಂಗಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿದ್ದಾರೆ.
ಯು.ಎ.ಇ ದೇಶವನ್ನು ಜಗತ್ತಿನ ಪ್ರಮುಖ ರಾಷ್ಟ್ರವಾಗಿ ಕಟ್ಟಿಬೆಳೆಸಲು ಶ್ರಮಿಸಿದ ರಾಷ್ಟ್ರಪಿತ ಶೈಖ್ ಝಾಹಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖ್ ಬಾವ, ಕಾರ್ದರ್ಶಿಗಳಾದ ಹಮೀದ್ ಪಿ.ಎಂ.ಹೆಚ್, ಜಮಾಲುದ್ದೀನ್ ಬಹರೈನ್, ಯು.ಎ.ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಮೀದ್ ಸ ಅದಿ, ಕಾರ್ಯದರ್ಶಿ ಉಸ್ಮಾನ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಉಪಾಧ್ಯಕ್ಷ ಹಾಜಿ ರಶೀದ್ ಬೆಳ್ಳಾರೆ, ಬ್ಯಾರೀಸ್ ಕಲ್ಚರಲ್ ಫಾರಂ ದುಬೈ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಹಾಜಿ ಅಬ್ದುಲ್ಲ ನಲ್ಕ, ಹಾಜಿ ಬಶೀರ್ ಬೊಳುವಾರ್, ಯು.ಟಿ ನೌಷದ್ ,ರಝಾಕ್ ಹಾಜಿ ಜೆಲ್ಲಿ, ಝೈನುದ್ದೀನ್ ಬೆಳ್ಳಾರೆ,ಅಬ್ದುಲ್ ಖಾದರ್ ಸಾಲೆತ್ತೂರು, ಮೂಸ ಹಾಜಿ ಬಸರ, ಕರೀಂ ಮುಸ್ಲಿಯಾರ್, ಇಕ್ಬಾಲ್ ಕಾಜೂರ್ ಶುಭ ಹಾರೈಸಿದರು.





