ತುಂಬೆ ಮೊಯ್ದೀನ್ ಅವರಿಗೆ ಎನ್ ಡಿಟಿವಿ 'ಗ್ಲೋಬಲ್ ಲೀಡರ್ ' ಗೌರವ

ದುಬೈ,ಡಿ.14: ಸಂಯುಕ್ತ ಅರಬ್ ಗಣರಾಜ್ಯಾದ್ಯಂತ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಷೇತ್ರದಲ್ಲಿ ತುಂಬೆ ಸಮೂಹದ ಸ್ಥಾಪಕ ಅಧ್ಯಕ್ಷ ತುಂಬೆ ಮೊಯಿದೀನ್ ಅವರ ಗಣನೀಯ ಕೊಡುಗೆಯನ್ನು ಗುರುತಿಸಿ ಎನ್‌ಡಿಟಿವಿ ರವಿವಾರ ಇಲ್ಲಿ ನಡೆದ ತನ್ನ ಗಲ್ಫ್ 2016ರ ಇಂಡಿಯನ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ’ಗ್ಲೋಬಲ್ ಲೀಡರ್’ ಬಿರುದನ್ನು ನೀಡಿ ಗೌರವಿಸಿದೆ. ದುಬೈ ಕ್ರೀಕ್ ಹೈಟ್ಸ್‌ನ ಹ್ಯಾಟ್ ರೀಜೆನ್ಸಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ತುಂಬೆ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಕೊಲ್ಲಿ ಪ್ರದೇಶದಿಂದ ಹಲವಾರು ಪ್ರಮುಖ ಭಾರತೀಯ ಉದ್ಯಮಿಗಳು ಮತ್ತು ವೃತ್ತಿಪರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ತುಂಬೆ ಅವರು,ತುಂಬ ವಿನಮ್ರತೆಯಿಂದ ಈ ಗೌರವವನ್ನು ಸ್ವೀಕರಿಸುತ್ತಿದ್ದೇನೆ. ಜಾಗತಿಕ ವೇದಿಕೆಗಳಲ್ಲಿ ಸಾಧನೆಗಳು ಗುರುತಿಸಲ್ಪಡುವುದು ತುಂಬ ಹೆಮ್ಮೆಯನ್ನು ಮೂಡಿಸುತ್ತದೆ. ನಾವು ನಮ್ಮ ಉದ್ಯಮವನ್ನು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿಯೇ ಪ್ರಶಸ್ತಿಯು ಒಲಿದು ಬಂದಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರಧಾನ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ಯಾನೆಲ್ ಚರ್ಚೆಯ ನೇತೃತ್ವವನ್ನೂ ತುಂಬೆಯವರು ವಹಿಸಿದ್ದರು. ಖಲೀಜ್ ಟೈಮ್ಸ್‌ನ ಅಸೋಸಿಯೇಟ್ ಎಡಿಟರ್ ವಿಕಿ ಕಪೂರ್, ಮುಲ್ಕ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಶಾಜಿ ಉಲ್ ಮುಲ್ಕ್, ಐಬಿಪಿಸಿಯ ಅಧ್ಯಕ್ಷ ಕುಲವಂತ್ ಸಿಂಗ್ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಯುಎಇಯಲ್ಲಿ ಸಾಧನೆಗಳ ಬಳಿಕ ತುಂಬೆ ಸಮೂಹ ತನ್ನ ಉದ್ಯಮಗಳನ್ನು ಆಫ್ರಿಕಾ ಮತ್ತು ಭಾರತಕ್ಕೆ ವಿಸ್ತರಿಸಲಿದೆ. ಅದರ ಪ್ರಮುಖ ಯೋಜನೆಗಳು 2022ರ ವೇಳೆಗೆ ಪೂರ್ಣಗೊಳ್ಳಲಿವೆ. ಈ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ತುಂಬೆ ಹಾಸ್ಪಿಟಲ್, ತುಂಬೆ ಫಾರ್ಮಸಿ,ತುಂಬೆ ಲ್ಯಾಬ್ಸ್ ಹಾಘೂ ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಕಾಫೀ ಶಾಪೆ ಸ್ಥಾಪಿಸುವ ಮೂಲಕ ತುಂಬೆ ಸಮೂಹವು ಭಾರತವನ್ನು ಪ್ರವೇಶಿಸಿದೆ. ಪ್ರಮುಖ ಮಹಾಗರಗಳಲ್ಲಿ ವಿವಿ ಕ್ಯಾಂಪಸ್‌ಗಳು ಮತ್ತು ಸರಣಿ ಬೋಧನಾ ಆಸ್ಪತ್ರೆಗಳ ಸ್ಥಾಪನೆ ಭವಿಷ್ಯದ ಯೋಜನೆಗಳಲ್ಲಿ ಸೇರಿವೆ. ಸಮೂಹವು 20 ರಾಷ್ಟ್ರಗಳಲ್ಲಿ ತನ್ನ ಪ್ರತಿನಿಧಿ ಕಚೇರಿಗಳನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ 15 ತುಂಬೆ ಶೈಕ್ಷಣಿಕ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಸಮೂಹದ ವ್ಯೆಹಾತ್ಮಕ ಯೋಜನೆಗಳ ಬಗ್ಗೆ ತುಂಬೆ ಅವರು ವಿವರಿಸಿದರು.
1998ರಲ್ಲಿ ತುಂಬೆ ಮೊಯಿದ್ದೀನ್ ಅವರಿಂದ ಸ್ಥಾಪಿಸಲ್ಪಟ್ಟ ತುಂಬೆ ಸಮೂಹವು ಇಂದು ಶಿಕ್ಷಣ,ಆರೋಗ್ಯ ರಕ್ಷಣೆ ,ವೈದ್ಯಕೀಯ ಸಂಶೋಧನೆ,ರೋಗನಿದಾನ,ಔಷಧಿ ಮಾರಾಟ ಇತ್ಯಾದಿಗಳು ಸೇರಿದಂತೆ 18 ವಿವಿಧ ಕ್ಷೇತ್ರಗಳಲ್ಲಿ 18 ಬ್ರಾಂಡ್‌ಗಳನ್ನು ನಿರ್ವಹಿಸುತ್ತಿದೆ. ಸಮೂಹವು ಪ್ರಸ್ತುತ ಸುಮಾರು 5,000 ನೌಕರರನ್ನು ಹೊಂದಿದ್ದು, 2022ರ ವೇಳೆಗೆ ಇದು ಸುಮಾರು 20,000 ತಲುಪುವ ನಿರೀಕ್ಷೆಯಿದೆ.
![]()
![]()
![]()







