ವಿದ್ಯುತ್ ಸಮಸ್ಯೆಗೆ ಸೌರವಿದ್ಯುತ್‌ಗೆ ಪರಿಹಾರ: ಕೆ.ಎಂ.ಉಡುಪ

ಉಡುಪಿ, ಡಿ.14: ದೇಶದಲ್ಲಿ ಜನಸಾಮಾನ್ಯರನ್ನು ಬಹಳಷ್ಟು ಕಾಡುತ್ತಿರುವ ಜೀವನಾವಶ್ಯಕ ಅಗತ್ಯತೆಗಳಲ್ಲಿ ಒಂದಾಗಿರುವ ವಿದ್ಯುತ್ ಸಮಸ್ಯೆಗೆ ಸೌರ ವಿದ್ಯುತ್ ಪರಿಹಾರವಾಗಿದೆ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆಲ್ಕೋ ಫೌಂಡೇಷನ್ ಯೋಜನೆಯಡಿ ಯಲ್ಲಿ ಉಡುಪಿ ಜಿಲ್ಲೆಯ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು ಹಾಗೂ ಆಯ್ದ ಕ್ರೆಡಿಟ್ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೌರ ಶಕ್ತಿ ಉಪಕರಣ ಮತ್ತು ಸಾಲ ನೀಡುವಿಕೆಯ ಬಗ್ಗೆ ಆಯೋಜಿಸಲಾದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸರಕಾರಗಳು ಇಂದು ಬದಲಿ ಇಂಧನ ವ್ಯವಸ್ಥೆಗೆ ವಿಶೇಷ ಮಹತ್ವ ಹಾಗೂ ಪ್ರೋತ್ಸಾಹಗಳನ್ನು ನೀಡುತ್ತಿವೆ. ನಮ್ಮ ಇಂದಿನ ಶಕ್ತಿ ಮೂಲಗಳಾದ ಕಲ್ಲಿದ್ದಲು, ತೈಲ ಮುಂತಾದವು ಶೀಘ್ರದಲ್ಲೇ ಬರಿದಾಗಬಹುದಾಗಿದ್ದು, ಇದಕ್ಕೆ ಬದಲಿ ವ್ಯವಸ್ಥೆಯನ್ನು ನಾವೀಗಲೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೌರಶಕ್ತಿ ಅತ್ಯುತ್ತಮ ಆಯ್ಕೆಯಾಗಿದೆ ಎಂದರು.
ಸೌರಶಕ್ತಿಯ ಉಪಕರಣಗಳೂ ಈಗಾಗಲೇ ಸಾಕಷ್ಟು ಸುಧಾರಿತಗೊಂಡಿವೆ. ಈವರೆಗೆ ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಇವುಗಳಿಗೆ ಸಾಲ ನೀಡುತಿದ್ದು, ಗ್ರಾಮೀಣ ಭಾಗದ ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗುವಂತೆ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ನೀಡಲು ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದರು.
ಇದೀಗ ಉಡುಪಿ ಜಿಲ್ಲೆಯ ಆಯ್ದ 25 ಮ್ಯಾನೇಜರ್‌ಗಳು, ಮೇಲ್ವಿಚಾರಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೌರಶಕ್ತಿ ಉಪಕರಣಗಳ ಕುರಿತು ಹಾಗೂ ಅವುಗಳಿಗೆ ಸಾಲ ನೀಡುವ ಕುರಿತು ಮಾಹಿತಿ ನೀಡಲು ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್‌ನ ಅದ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಾಯಕ ನಿಬಂಧಕಿ ಚಂದ್ರ ಪ್ರತಿಮಾ ಎಂ.ಜೆ., ಭಾರತೀಯ ವಿಕಾಸಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹಕ ಕಟಗೇರಿ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಬಿ.ಜಗದೀಶ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.







