ಅಹ್ಮದ್ ಅನ್ವರ್‌ಗೆ ಸಂತಾಪ ಸೂಚಕ ಸಭೆ

ಮಂಗಳೂರು, ಡಿ.14: ಕವಿ, ಪತ್ರಕರ್ತ, ಛಾಯಾಗ್ರಾಹಕ ಅಹ್ಮದ್ ಅನ್ವರ್‌ಗೆ ಮುಸ್ಲಿಮ್ ಲೇಖಕರ ಸಂಘದ ಆಶ್ರಯದಲ್ಲಿ ಬುಧವಾರ ನಗರದ ರವೀಂದ್ರ ಕಲಾಭವನದಲ್ಲಿ ಸಂತಾಪ ಸೂಚಕ ಸಭೆ ಜರಗಿತು.
ಸಂಘದ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿ, ಅಹ್ಮದ್ ಅನ್ವರ್‌ರ ಸಾಹಿತ್ಯದಲ್ಲಿ ಸಾರಸ್ವತ ಲೋಕದ ಪಕ್ವತೆಗಿಂತ ಮಾನವತೆಯ ತುಡಿತ ಎದ್ದು ಕಾಣುತ್ತಿವೆ. ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕವೂ ಬರೆಯುವ ಹುಮ್ಮಸ್ಸು ಇತ್ತು. ಬರೆಯುವ ಶಕ್ತಿ ಕಳಕೊಂಡರೂ ಕೂಡ ತನ್ನ ಪತ್ನಿಯ ಮೂಲಕ ಬರೆಯಿಸುತ್ತಿದ್ದುದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ರಹೀಂ ಟೀಕೆ ಮಾತನಾಡಿ, ಅಹ್ಮದ್ ಅನ್ವರ್‌ರ ಅಗಲಿಕೆ ನಿರೀಕ್ಷಿತವಾಗಿದ್ದರೂ ಕೂಡ ಆ ಕಟು ವಾಸ್ತವವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅನ್ವರ್‌ರಂತಹ ಪ್ರತಿಭಾವಂತರು ಬೇಕು ಎಂಬುದನ್ನು ಅದು ಸೂಚಿಸುತ್ತಿದೆ. ಕಳೆದ ನಾಲ್ಕೈದು ವರ್ಷದಿಂದ ಅವರು ಸದಾ ಸಂಘರ್ಷದ ಬದುಕು ಸಾಗಿಸುತ್ತಿದ್ದರು. ಚೇತರಿಕೆಯ ಮಧ್ಯೆ ಸಾಹಿತ್ಯ ಕೃತಿಗಳಿಗೆ ಪ್ರತಿಕ್ರಿಯಿಸುವ ಮನಸ್ಸು ಇತ್ತು ಎಂದರು.
ಪತ್ರಕರ್ತ ಎನ್.ವಿ. ಪೌಲೋಸ್ ಮಾತನಾಡಿ, ಸದಾ ನಗುಮುಖದ ಅಹ್ಮದ್ ಅನ್ವರ್ ಸ್ನೇಹಜೀವಿಯಾಗಿದ್ದರು. ಭೇಟಿಯಾದಾಗಲೆಲ್ಲಾ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದು ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುರ್ರಹ್ಮಾನ್ ಮಾತನಾಡಿ, ಕಳೆದ 20 ವರ್ಷದ ನಮ್ಮ ನಡುವಿನ ಒಡನಾಟದಲ್ಲಿ ಅವರು ಎಂದೂ ಯಾರನ್ನೂ ನೋಯಿಸಿದ್ದನ್ನು ನಾನು ಕಂಡಿಲ್ಲ, ಕೇಳಿಲ್ಲ. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಮನೋಭಾವ ಅವರಲ್ಲಿತ್ತು ಎಂದರು.
ಅನುಪಮ ಮಾಸಿಕದ ಸಂಪಾದಕಿ ಶಹನಾಝ್ ಎಂ. ಮಾತನಾಡಿ, ಅನ್ವರ್ ಸದಾ ನನಗೆ ಮಾರ್ಗದರ್ಶಕರಾಗಿದ್ದರು. ನನ್ನ ಬರಹಗಳಿಗೆ ಟೀಕೆಗಳು ವ್ಯಕ್ತವಾದಾಗ ಸಮಾಧಾನಪಡಿಸುತ್ತಿದ್ದರು. ಮನೆಯಲ್ಲಿ ಯಾರೇ ಅಸೌಖ್ಯಕ್ಕೀಡಾದರೂ ಕೂಡ ಎಲ್ಲ ರೀತಿಯ ಸಂಕಟಗಳನ್ನು ಅನುಭವಿಸುತ್ತಿದ್ದುದು ಮಹಿಳೆಯರು. ಅದಕ್ಕೆ ಅನ್ವರ್‌ರ ಪತ್ನಿ ಶಾಹಿದಾ ಕೂಡ ಹೊರತಲ್ಲ. ಆದರೆ, ಅವರೆಂದೂ ಕೂಡ ತನ್ನ ನೋವನ್ನು ಇತರರ ಮುಂದೆ ತೋರಿಸಿಕೊಡುತ್ತಿರಲಿಲ್ಲ. ಎಲ್ಲವನ್ನೂ ಸಹನೆಯಿಂದ ಎದುರಿಸಿ ಪತಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಅಹ್ಮದ್ ಅನ್ವರ್ ರಚಿಸಿದ ‘ನೀನಾರಿಗಾದೆ ಮಾನವ’ ಪದ್ಯವನ್ನು ಕವಿ ಹುಸೈನ್ ಕಾಟಿಪಳ್ಳ ಹಾಡಿದರು. ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ. ಕುಕ್ಕಿಲ, ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಶಾಂತಿಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಪತ್ರಕರ್ತ ಆರೀಫ್ ಪಡುಬಿದ್ರೆ, ಲೇಖಕ ರಶೀದ್ ವಿಟ್ಲ ಅನಿಸಿಕೆ ವ್ಯಕ್ತಪಡಿಸಿದರು.
ಅನಸ್ ಮುಹಿಯ್ಯುದ್ದೀನ್ ಕಿರಾಅತ್ ಪಠಿಸಿದರು. ಮುಹಮ್ಮದ್ ಇರ್ಶಾದ್ ವೇಣೂರು ಭಾವಾನುವಾದ ವಾಚಿಸಿದರು. ಕೆ.ಎಂ. ಶರೀಫ್ ದುಆ ಮಾಡಿದರು. ಸಂಘದ ಉಪಾಧ್ಯಕ್ಷ ಬಿ.ಎ. ಮುಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹಿಸುತ್ತಿದ್ದ ಅಪ್ಪ ಯಾವ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು ಎಂದು ಎಚ್ಚರಿಸುತ್ತಿದ್ದರು. ಅವರು ನನಗೆ ಸದಾ ಮಾದರಿಯಾಗಿದ್ದರು.
ಸಲ್ಮಾನ್, (ಅಹ್ಮದ್ ಅನ್ವರ್‌ರ ಪುತ್ರ)







