ಪೊಲೀಸ್ ಸಿಬ್ಬಂದಿ ವರ್ಗಕ್ಕೆ ತುಳು ಭಾಷಾ ತರಭೇತಿ ಕಾರ್ಯಾಗಾರ

ಮಂಗಳೂರು, ಡಿ.14: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊರಜಿಲ್ಲೆಗಳಿಂದ ನೇಮಕಗೊಂಡ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಏರ್ಪಡಿಸಲಾದ ತುಳು ಭಾಷಾ ತರಭೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆಯಿತು.
ಪೊಲೀಸ್ ಆಯುಕ್ತ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಎಂ., ಡಿಸಿಪಿಗಳಾದ ಶಾಂತರಾಜು, ಡಾ. ಸಂಜೀವ ಎಂ. ಪಾಟೀಲ ಉಪಸ್ಥಿತರಿದ್ದರು.
3ನೆ ತಂಡಕ್ಕಾಗಿ ನಡೆಸಿದ ಈ ಶಿಬಿರದಲ್ಲಿ 42 ಪೊಲೀಸರು ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳಾದ ಮುಲ್ಕಿ ಠಾಣೆಯ ಸಬೀಹಾ ಬಾನು, ಸುರತ್ಕಲ್ ಠಾಣೆಯ ದೀಪಾ ಎಚ್., ಕದ್ರಿ ಠಾಣೆಯ ಮಂಜಣ್ಣ, ಸತ್ಯಾ ಎಂ. ತುಳುವಿನಲ್ಲೇ ಅನಿಸಿಕೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿಶ್ವನಾಥ ಬದಿಕಾನ, ಡಾ. ಗಿರಿಯಪ್ಪ, ರೂಪಕಲಾ ಆಳ್ವ, ಪ್ರೊ. ವೇದಾವತಿ ಸಹಕರಿಸಿದ್ದರು.
ಪೊಲೀಸ್ ಅಧಿಕಾರಿಗಳಾದ ಹರಿಶ್ಚಂದ್ರ ಆರ್. ಕಾರ್ಯಕ್ರಮ ನಿರೂಪಿಸಿದರು. ವೆಲೆಂಟಿನ್ ಡಿಸೋಜ ವಂದಿಸಿದರು.





