ಪೊಲೀಸರೊಂದಿಗೆ ಮಾತನಾಡಲು ಭಯ ಬೇಡ : ಪಿಎಸ್‌ಐ ಪಾಂಡುರಂಗ

ಪುತ್ತೂರು,ಡಿ.14 : ಅಪರಾಧ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಪೊಲೀಸರೊಂದಿಗೆ ಮಾತನಾಡಲು, ವ್ಯವಹರಿಸಲು ಭಯ ಬೇಡ ಎಂದು ಪುತ್ತೂರು ನಗರ ಠಾಣೆಯ ಪಿಎಸ್‌ಐ ಪಾಂಡುರಂಗ ಅವರು ಹೇಳಿದರು.
ಪುತ್ತೂರಿನ ಶಿಕ್ಷಣ ಸಂಪನ್ಮೂಲ ಕೇಂದ್ರ , ಪುತ್ತೂರು ನಗರ ಪೊಲೀಸ್ ಠಾಣೆ ಮತ್ತು ಮಂಗಳೂರಿನ ಪಡಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನರಿಮೊಗ್ರುವಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ವತ್ಸಲಾ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಹರೀಶ್ ಅವರು ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಕೃಷ್ಣ ಶೆಟ್ಟಿ,ಉಪಪ್ರಾಂಶುಪಾಲ ರಾಜೀವಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಜೊತೆ ಕಾರ್ಯದರ್ಶಿ ಪ್ಯಾಟ್ರಿಕ್ ಲೋಬೋ ಮತ್ತಿತರರು ಇದ್ದರು. ಉಪನ್ಯಾಸಕಿ ಪೂರ್ಣಿಮಾ ರಾವ್ ಸ್ವಾಗತಿಸಿದರು .ಅಖಿಲ ಭಾರತ ಅಪರಾಧ ನಿರ್ಮೂಲನಾ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಗೌಡ ಅಲುಂಬುಡ ವಂದಿಸಿದರು. ಪಡಿ ಸಂಸ್ಥೆಯ ತಾಲೂಕು ಸಂಯೋಜಕಿ ಮಮತಾ ರೈ ನಿರೂಪಿಸಿದರು.







