ಅಕ್ರಮವಾಗಿ ಸಂಗ್ರಹಿಸಿದ್ದ ಶ್ರೀಗಂಧ,
ಹಂದಿಯ ಚಿಪ್ಪುಗಳು ವಶ: ಇಬ್ಬರ ಬಂಧನ
ತರೀಕೆರೆ, ಡಿ.14: ಪಟ್ಟಣದ ಕೋಡಿಕ್ಯಾಂಪಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 50ಕೆಜಿ ಶ್ರೀಗಂಧದ ತುಂಡು ಹಾಗೂ ಕೊರಡುಗಳು ಸೇರಿದಂತೆ ಬೆಲೆಬಾಳುವ ಚಿಪ್ಪುಹಂದಿಯ 5 ಕೆಜಿ ಚಿಪ್ಪುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
ಲಿಂಗದಹಳ್ಳಿಯ ಗಂಗೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಗಂಗೂರಿನ ನಿವಾಸಿಗಳಾದ ಮಂಜುನಾಥ ಮತ್ತು ಮುರುಗೇಶ ಎಂಬ ವ್ಯಕ್ತಿಗಳನ್ನು ಅನುಮಾನಗೊಂಡು ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ವಾಹನ ನಿಲ್ಲಿಸಿ ತಪಾಸಣೆ ನಡೆಸಿದಾಗ ವಾಹನದಲ್ಲಿ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ.
ಕೂಡಲೇ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿಗಳು ಪಟ್ಟಣದ ಕೋಡಿಕ್ಯಾಂಪಿನ ವಾಸಿ ಚಂದ್ರಶೇಖರ ಆಲಿಯಾಸ್ ಬೋಟಿ ಚಂದ್ರ ಎಂಬ ವ್ಯಕ್ತಿಗೆ ಮಾಲನ್ನು ಸರಬರಾಜು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಚಂದ್ರಶೇಖರ್ ಆಲಿಯಾಸ್ ಬೋಟಿ ಚಂದ್ರ ಎಂಬ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಮನೆಯ ಬೀಗವನ್ನು ಒಡೆದು ಅಧಿಕಾರಿಗಳು ಮನೆ ಪ್ರವೇಶಿಸಿದ್ದಾರೆ. ಮನೆ ಶೋಧ ನಡೆಸಿದಾಗ ದೇವರಕೋಣೆಯ ಕೆಳಗೆ ಯಾರಿಗೂ ತಿಳಿಯದಂತೆ ರಂಧ್ರ ಮಾಡಿಕೊಂಡು ನೆಲಮಾಳಿಗೆ ಒಳಗೆ ಸಂಗ್ರಹಿಸಿದ್ದ ಮಾಲನ್ನು ವಶಪಡಿಕೊಂಡು ತನಿಖೆ ಕೈಗೊಂಡಿದ್ದಾರೆ
ಈ ಸಂದರ್ಭದಲ್ಲಿ ಎಸಿಎಫ್ ಎಚ್.ಕೆ. ಶ್ರೀನಿವಾಸ್, ಆರ್.ಎಫ್.ಓ ಸಂತೋಶ್ ಸಾಗರ್ ಹಾಗೂ ಸಿಬ್ಬಂದಿ ದಾಳಿಯ ನೇತೃತ್ವವಹಿಸಿದ್ದರು.







