ಸಾಲ ಬಾಧೆ
ಬತ್ತಿಹೋದ ಕೊಳವೆ ಬಾವಿಗಳು: ರೈತ ಆತ್ಮಹತ್ಯೆ
ಹೊನ್ನಾಳಿ, ಡಿ.14: ಸಾಲ ಬಾಧೆ, ಜಮೀನಿನಲ್ಲಿನ ಎರಡು ಕೊಳವೆ ಬಾವಿಗಳು ಬತ್ತಿಹೋದ ಪರಿಣಾಮ ಬೆಳೆಗಳು ಒಣಗುತ್ತಿರುವುದರಿಂದ ತೀವ್ರ ಮನನೊಂದ ರೈತ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಮಾಸಡಿ ಗ್ರಾಮದಲ್ಲಿ ಸಂಭವಿಸಿದೆ. ತಾಲೂಕಿನ ಮಾಸಡಿ ಗ್ರಾಮದ ಪ್ರಕಾಶ್(39) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತನಿಗೆ ಮೂರು ಎಕರೆ ಜಮೀನು ಇತ್ತು. ಅದರಲ್ಲಿ 1.50 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದ. ಅದಿನ್ನೂ ಫಲ ನೀಡುತ್ತಿರಲಿಲ್ಲ. ಇನ್ನುಳಿದ 1.50 ಎಕರೆ ಪ್ರದೇಶದಲ್ಲಿ ಭತ್ತ, ಮೆಕ್ಕೆಜೋಳ ಬೆಳೆದಿದ್ದ. ಸುಮಾರು 10 ಎಕರೆ ಜಮೀನನ್ನು ಗುತ್ತಿಗೆಗೆ ಸಾಗುವಳಿ ಮಾಡುತ್ತಿದ್ದ. ನೀರಾವರಿಗಾಗಿ ಸುಮಾರು 8ರಿಂದ 10 ಕೊಳವೆ ಬಾವಿಗಳನ್ನು ಕೊರೆಸಿದ್ದು, ಎಲ್ಲವೂ ವಿಫಲವಾಗಿದ್ದವು.
ಈಚೆಗೆ ಕೊರೆಸಿದ್ದ ಎರಡು ಕೊಳವೆ ಬಾವಿಗಳೂ ವಿಫಲವಾಗಿದ್ದವು. ಈ ವರ್ಷ ಮಳೆ ಕೈಕೊಟ್ಟ ಪರಿಣಾಮ ಬೆಳೆ ಬಂದಿರಲಿಲ್ಲ. ಇದರ ಪರಿಣಾಮ ಸಾಲದ ಹೊರೆ ಹೆಚ್ಚಾಗಿ, ತೀವ್ರ ಮನನೊಂದು ನೇಣಿಗೆ ಶರಣಾಗಿದ್ದಾರೆ. ಕೃಷಿಗಾಗಿ ಈತ ಹೊನ್ನಾಳಿಯ ವಿವಿಧ ಬ್ಯಾಂಕ್‌ಗಳು, ಮಾಸಡಿ ವಿಎಸ್‌ಎಸ್‌ಬಿ ಸೇರಿದಂತೆ ವಿವಿಧೆಡೆ ಖಾಸಗಿಯಾಗಿ ಸುಮಾರು 7 ಲಕ್ಷ ರೂ., ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.





