ಮುಗಿಯದ ರಾಯಣ್ಣ ಬ್ರಿಗೇಡ್ ಕಲಹ
ದಿಲ್ಲಿಯಲ್ಲಿ ಬೀಡುಬಿಟ್ಟ ಈಶ್ವರಪ್ಪ ಬಿಎಸ್‌ವೈ ವಿರುದ್ಧ ಹೈಗೆ ಚಾರ್ಜ್‌ಶೀಟ್

ಬಿ. ರೇಣುಕೇಶ್
ಶಿವಮೊಗ್ಗ, ಡಿ. 14: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿ ಸಿಯೇ ಸಿದ್ಧ ಎಂದು ಘೋಷಿಸುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ್ದ ನೇರ ಸಮರ ಸಾರಿ, ಅವರ ಕೆಂಗಣ್ಣಿಗೆ ತುತ್ತಾಗಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಕಳೆದೆರಡು ದಿನಗಳಿಂದ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಪಕ್ಷದ ರಾಷ್ಟ್ರೀಯ ಮುಖಂಡರನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬಿ.ಎಸ್.ಯಡಿಯೂರಪ್ಪ ಮತ್ತವರ ಕೆಲ ಬೆಂಬಲಿಗರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರುಗಳನ್ನು ಸಲ್ಲಿಸಿದ್ದಾರೆ ಎನ್ನಲಾಗುತ್ತಿದ್ದು, ಶಿಸ್ತುಕ್ರಮ ಏನಾದರೂ ಜರಗಿಸುವುದಿದ್ದರೆ ಮೊದಲು ಬಿಎಸ್‌ವೈ ಮತ್ತವರ ಬೆಂಬಲಿಗರ ವಿರುದ್ಧವೇ ಜರಗಿಸಿ ಎಂದು ವರಿಷ್ಠರಿಗೆ ತಿಳಿಸಿದ್ದಾರೆನ್ನಲಾಗಿದೆ!
ತಿರುಗೇಟು: ಪಕ್ಷದ ಆದೇಶ ಉಲ್ಲಂಘಿಸಿ ಕೆ.ಎಸ್.ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತಿದ್ದು, ಕೆಎಸ್‌ಇ ಹಾಗೂ ಇತರರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು ಎಂದು ಬಿಎಸ್.ವೈ.ರವರು ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಮುಖಂಡರಿಗೆ ದೂರು ಸಲ್ಲಿಸಿದ್ದರು. ಮತ್ತೊಂದೆಡೆ ಬಿಎಸ್‌ವೈ ವಿರೋಧಿ ಬಣವು ಕೂಡ ಬಿಎಸ್‌ವೈ ಮತ್ತವರ ಬೆಂಬಲಿಗರ ವಿರುದ್ಧ ಪ್ರತಿದೂರು ಸಲ್ಲಿಸಿತ್ತು. ದೂರು-ಪ್ರತಿದೂರುಗಳ ಬಗ್ಗೆ ಬಿಜೆಪಿ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದರು. ರಾಜ್ಯ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ತತ್‌ಕ್ಷಣವೇ ಒಳಜಗಳಕ್ಕೆ ಪೂರ್ಣವಿರಾಮ ಹಾಕುವಂತೆ ತಾಕೀತು ಮಾಡಿದ್ದರು. ಈ ಬೆಳವಣಿಗೆಗಳ ನಡುವೆಯೆ ಈಶ್ವರಪ್ಪ ದಿಲ್ಲಿಗೆೆ ತೆರಳಿರುವುದು ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಬಿಎಸ್‌ವೈ ಹಾಗೂ ಅವರ ಕೆಲ ಬೆಂಬಲಿಗರು ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರ ಮತ್ತು ಸರ್ವಾಧಿಕಾರಿ ಧೋರಣೆಯ ಬಗ್ಗೆ, ಉದ್ದೇಶಪೂರ್ವಕವಾಗಿಯೇ ಹಿರಿಯ ಮುಖಂಡರನ್ನು ಕಡೆಗಣಿಸುತ್ತಿರುವ ಕುರಿತಂತೆ ಸವಿವರವಾದ ವರದಿಯನ್ನು ಈಶ್ವರಪ್ಪ ರಾಷ್ಟ್ರೀಯ ಮುಖಂಡರಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಬಲ: ಮತ್ತೊಂದೆಡೆ ರಾಜ್ಯ ಬಿಜೆಪಿಯಲ್ಲಿರುವ ಬಿಎಸ್‌ವೈ ವಿರೋಧಿ ಬಣವು ಕೂಡ ಸದ್ದಿಲ್ಲದೆ ಸಕ್ರಿಯವಾಗಿದ್ದು,ಈಶ್ವರಪ್ಪಗೆ ಪರೋಕ್ಷವಾಗಿ ಬೆಂಬಲವಾಗಿ ನಿಂತಿದೆ. ಈಗಾಗಲೇ ರಾಜ್ಯದ ಕೆಲ ಹಿರಿಯ ಬಿಜೆಪಿ ಮುಖಂಡರು ಗುಪ್ತವಾಗಿ ರಾಷ್ಟ್ರೀಯ ಮುಖಂಡರನ್ನು ಭೇಟಿಯಾಗಿ ಬಿಎಸ್‌ವೈ ಅನುಸರಿಸುತ್ತಿರುವ ಧೋರಣೆಯ ಬಗ್ಗೆ ಮಾಹಿತಿ ನೀಡಿದೆ. ಯಾವುದೇ ಕಾರಣಕ್ಕೂ ಈಶ್ವರಪ್ಪ ಹಾಗೂ ಇತರರ ವಿರುದ್ಧ ಶಿಸ್ತುಕ್ರಮ ಜರಗಿಸದಂತೆ ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಮುಖಂಡರ ಬೆಂಬಲದಿಂದಲೇ ಈಶ್ವರಪ್ಪ ಇದೀಗ ಬಿಎಸ್‌ವೈ.
ವಿರುದ್ಧ ನೇರ ಅಖಾಡಕ್ಕೆ ಧುಮುಕಿದ್ದು, ರಾಷ್ಟ್ರೀಯ ಮುಖಂಡರಿಗೆ ಪ್ರತಿದೂರು ನೀಡಿದ್ದಾರೆ. ಪಕ್ಷದ ಎಲ್ಲ ಮುಖಂಡರನ್ನು ಒಗ್ಗೂಡಿಸಿ ಕೊಂಡೊಯ್ಯುವಂತೆ ಬಿಎಸ್‌ವೈಗೆ ಕಿವಿಮಾತು ಹೇಳುವಂತೆ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದ್ವೇಷ: ಬಿ.ಎಸ್.ವೈ. ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪಿಸಿದ್ದರು. ತದನಂತರ ಮರಳಿ ಬಿಜೆಪಿಗೆ ಬಂದಿದ್ದರು.
ಈ ಸಂದಭರ್ದಲ್ಲಿ ನಡೆದಂತಹ ಘಟನೆಗಳನ್ನೇ ತಮ್ಮ ಮನಸ್ಸಿನಲ್ಲಿಟ್ಟುಕೊಂಡು ಪಕ್ಷದ ಕೆಲ ಮುಖಂಡರ ವಿರುದ್ಧ್ದ ಇದೀಗ ದ್ವೇಷ ರಾಜಕಾರಣ ನಡೆಸಲಾರಂಭಿಸಿದ್ದಾರೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ, ತಮಗೆ ನಿಷ್ಠರಾದವರಿಗೆ ಮಾತ್ರ ಪಕ್ಷದ ಪ್ರಮುಖ ಸ್ಥಾನಮಾನ ಕಲ್ಪಿಸುತ್ತಿದ್ದಾರೆ. ಇದರಿಂದ ನಿಷ್ಠಾವಂತ ಕಾರ್ಯಕರ್ತರು ಭ್ರಮನಿರಸ ನಗೊಳ್ಳುವಂತಾಗಿದೆ ಎಂದು ಈಶ್ವರಪ್ಪರವರು ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಹಿಂದುಳಿದ ವರ್ಗಗಳ ಸಮಾವೇಶಕ್ಕೂ ಮುನ್ನ ತಮಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಭರವಸೆ ನೀಡಿದ್ದರು. ಆದರೆ ತದನಂತರ ಉದ್ದೇಶಪೂರ್ವಕವಾಗಿಯೇ ತಮ್ಮನ್ನು ಕಡೆಗಣಿಸಿ ಸಮಾವೇಶದ ಸಿದ್ಧತಾ ಕಾರ್ಯಕ್ರಮಗಳಿಂದಲೇ ದೂರವಿಡುವ ಕೆಲಸ ಮಾಡಿದರು. ಇದೇ ರೀತಿಯಲ್ಲಿ ಇತರ ನಿರ್ಧಾರ ಕೈಗೊಳ್ಳುವ ವೇಳೆಯೂ ಇತರ ಮುಖಂಡರನ್ನು ನಿರ್ಲಕ್ಷಿಸುತ್ತಿದ್ದಾರೆ. ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪರವರು ವರಿಷ್ಠರ ಬಳಿ ದೂರುಗಳ ಸರಮಾಲೆಯನ್ನೇ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಪ್ರಸ್ತುತ ರಾಜ್ಯ ಬಿಜೆಪಿಯು ಅಕ್ಷರಶಃ ಒಡೆದ ಮನೆಯಾಗಿದೆ. ಮತ್ತೊಂದೆಡೆ ಈ ಬಿರುಕಿಗೆ ತೇಪೆ ಹಾಕಲು ರಾಷ್ಟ್ರೀಯ ಮುಖಂಡರು ಮುಂದಾಗಿದ್ದಾರೆ. ಪಕ್ಷದ ಮುಖಂಡರ ನಡುವೆ ನಡೆಯುತ್ತಿರುವ ಒಳಜಗಳ ಮುಂದೆ ಇನ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.
ವರಿಷ್ಠರ ಸೂಚನೆಗೆ ಬದ್ಧವಿರಲು ನಿರ್ಧಾರ...?!
ಬಿಜೆಪಿ ಪಕ್ಷದ ಸಂಘಟನೆಗೆ ಪೂರಕವಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಲಾಗಿದೆ. ಬಿಎಸ್‌ವೈ ಹಾಗೂ ಅವರ ಕೆಲ ಬೆಂಬಲಿಗರು ಮಾತ್ರ ಬ್ರಿಗೇಡ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉಳಿದಂತೆ ಪಕ್ಷದ ಇತರ ಮು ಖಂಡರಿಗೆ ಬ್ರಿಗೇಡ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿದ್ದು, ಬೆಂಬಲ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚಿಸಿದರೆ ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ. ತಮ್ಮ ಸೂಚನೆಗೆ ಬದ್ಧವಿರುವುದಾಗಿ ಪಕ್ಷದ ರಾಷ್ಟ್ರೀಯ ಮುಖಂಡರಿಗೆ ಕೆ.ಎಸ್.ಈಶ್ವರಪ್ಪರವರು ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.







