ಮಲೆನಾಡಿನಲ್ಲಿ ಮುಂದುವರಿದ ವಾರ್ದಾ ಚಂಡಮಾರುತ ಎಫೆಕ್ಟ್
ಎಲ್ಲೆಡೆ ತುಂತುರು ಮಳೆ-ಉಷ್ಣಾಂಶದಲ್ಲಿ ದಿಢೀರ್ ಕುಸಿತ!
ಶಿವಮೊಗ್ಗ, ಡಿ. 14: ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಅಬ್ಬರಿಸುತ್ತಿರುವ ‘ವಾರ್ದಾ’ ಚಂಡಮಾರುತದ ಎಫೆಕ್ಟ್ ಮಲೆನಾಡಿನ ಮೇಲೆಯೂ ಪರಿಣಾಮ ಬೀರಿದ್ದು, ಸತತ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಬಹುತೇಕ ಎಲ್ಲೆಡೆ ತುಂತುರು ಮಳೆಯಾಗುತ್ತಿದೆ. ಮತ್ತೊಂದೆಡೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಿಢೀರ್ ಆಗಿ ಉಷ್ಣಾಂಶದ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗಿದೆ. ಶೀತ ಮಾರುತಗಳ ವೇಗ ತೀವ್ರವಾಗಿದ್ದು, ಮೊದಲೇ ಚಳಿಯಿಂದ ತತ್ತರಿಸಿದ್ದ ಮಲೆನಾಡಿಗರು ಇದೀಗ ‘ವಾರ್ದಾ’ ಚಂಡಮಾರುತ ಸೃಷ್ಟಿಸಿರುವ ಹವಾಮಾನ ವೈಪರೀತ್ಯದಿಂದ ಅಕ್ಷರಶಃ ದಿನವಿಡೀ ಗಡಗಡ ನಡುಗುವಂತಾಗಿದೆ!
ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ‘ವಾರ್ದಾ’ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ಮತ್ತೊಂದೆಡೆ ಈ ಚಂಡಮಾರುತವು ವಾಯುಭಾರ ಕುಸಿತ ಸೃಷ್ಟಿಸಿದ್ದು, ಇದರಿಂದ ರಾಜ್ಯದ ಒಳನಾಡು ಹಾಗೂ ಕರಾವಳಿಯ ಪ್ರದೇಶಗಳಲ್ಲಿ ಮುಂದಿನ ಒಂದೆರೆಡು ದಿನಗಳ ಕಾಲ ತುಂತುರು ಮಳೆ, ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತಿವೆ. ಶಿವಮೊಗ್ಗ ನಗರದಲ್ಲಿ ಸತತ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ.
ಮಂಗಳವಾರ ಕಡಿಮೆಯಿದ್ದ ಮಳೆಯ ತೀವ್ರತೆ ತಡರಾತ್ರಿಯಿಂದ ಚುರುಕುಗೊಂಡಿದೆ. ಆಗಾಗ್ಗೆ ತುಂತುರು ವರ್ಷಧಾರೆಯಾಗುತ್ತಿದೆ. ಉಷ್ಣಾಂಶದಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗಿದ್ದು, ಹಗಲು ವೇಳೆಯಲ್ಲಿಯೂ ನಾಗರಿಕರು ಗಡಗಡ ನಡುಗುವಂತಹ ಸ್ಥಿತಿ ಸೃಷ್ಟಿಯಾಗಿದೆ. ಇದೇ ಸ್ಥಿತಿ: ಜಿಲ್ಲೆಯ ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ ತಾಲೂಕು ಕೇಂದ್ರಗಳು ಸೇರಿದಂತೆ ಪ್ರಮುಖ ಹೋಬಳಿ ಕೇಂದ್ರಗಳಾದ ಹೊಳೆಹೊನ್ನೂರು, ಹಾರ್ನಳ್ಳಿ, ಆಯನೂರು, ಕುಂಸಿ, ಆನಂದಪುರಂ, ಶಿರಾಳಕೊಪ್ಪ, ಆನವಟ್ಟಿ ಸೇರಿದಂತೆ ಇತರ ಪ್ರಮುಖ ಪ್ರದೇಶಗಳಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಉಷ್ಣಾಂಶದಲ್ಲಿ ಇಳಿಕೆಯಾಗಿರುವ ವರದಿಗಳು ಬಂದಿವೆ.
ಸಂಕಷ್ಟ: ಜಿಲ್ಲೆಯ ಹಲವೆಡೆ ಕೆಲ ರೈತರು ಭತ್ತ ಕಟಾವು ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸ್ತುತ ಬೀಳುತ್ತಿರುವ ತುಂತುರು ಮಳೆಯಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬೆಳೆ ಸಂರಕ್ಷಣೆಗೆ ಹರಸಾಹಸ ನಡೆಸುವಂತಾಗಿದೆ. ಮತ್ತೊಂದೆಡೆ ಕಟಾವು ಹಂತದಲ್ಲಿರುವ ಭತ್ತದ ಬೆಳೆಗೂ ಪ್ರಸ್ತುತ ಬೀಳುತ್ತಿರುವ ತುಂತುರು ಮಳೆಯು ಹಾನಿಯುಂಟು ಮಾಡುವ ಆತಂಕ ಬೆಳೆಗಾರರಲ್ಲಿ ಆವರಿಸಿದೆ.
ಭತ್ತದ ಕೃಷಿಗೆ ಚಂಡಮಾರುತದ ಪೆಟ್ಟು ರೈತ ಕಂಗಾಲು
ಮೂಡಿಗೆರೆ: ಮಲೆನಾಡಿನಲ್ಲಿ ‘ವಾರ್ದಾ’ ಚಂಡಮಾರುತದ ತಂಗಾಳಿಯ ಮಳೆ ಹೊಡೆತಕ್ಕೆ ಭತ್ತ ಕೃಷಿಕರನ್ನು ಕಂಗಾಲುಗೊಳಿಸಿದೆ. ಮಲೆನಾಡಿನಲ್ಲಿ ಭತ್ತ ಕೊಯ್ಲು ಹಂತದಲ್ಲಿದ್ದು, ಕಟಾವು ಮಾಡಿದ ಹಲವು ರೈತರ ಬೆಳೆ ಮಳೆ ಸುರಿದ ಪರಿಣಾಮದಿಂದ ನಷ್ಟ ಉಂಟಾಗಿದೆ.
ತಮಿಳುನಾಡಿನಲ್ಲಿ ಬೀಸಿದ ‘ವಾರ್ದಾ’ ಚಂಡಮಾರುತಕ್ಕೆ ಮಳೆಯ ಹೊಡೆತ ಮಾತ್ರವಲ್ಲದೇ ಭತ್ತದ ಕೃಷಿ ಮಾಡಿದ ಸಣ್ಣ ರೈತರು ಭತ್ತ ಕಟಾವು ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಟ್ಟಿಗೆಹಾರದ ತರುವೆ, ಬಣಕಲ್ ಸುತ್ತಮುತ್ತ ಭತ್ತ ಬೆಳೆದಿರುವ ರೈತರು ಮಳೆಯಿಲ್ಲದೇ ಸಂಕಷ್ಟ ಎದುರಾಗಿ ಕೊನೆಗೂ ಭತ್ತದ ಬೆಳೆ ಮೇಲೇರುತ್ತಿದ್ದಂತೆ ‘ವಾರ್ದಾ’ ಚಂಡಮಾರುತದಿಂದ ಅವರ ಕೃಷಿ ಬದುಕಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.
ಕೊಟ್ಟಿಗೆಹಾರದ ತರುವೆಯಲ್ಲಿ ಸುಮಾರು 50 ಎಕರೆ ಜಮೀನಿನಲ್ಲಿ ರೈತರು ಭತ್ತದ ಕೃಷಿ ಮಾಡಿದು,್ದ ಕೊಯ್ಲು ಸಮಯದಲ್ಲಿ ಮಳೆ ಸುರಿದು ಭತ್ತ ನೆಲಸಮವಾಗಿದೆ. ಭತ್ತದ ಕೃಷಿಯನ್ನೇ ನಂಬಿದ್ದ ರೈತರಿಗೆ ಚಂಡಮಾರುತದ ಪರಿಣಾಮ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಲೆನಾಡಿನಲ್ಲಿ ಕಾಫಿ ಬೆಳೆಗಾರರಿಗೂ ಕೂಡ ಮಳೆಯಿಂದ ಆಪತ್ತು ಸಂಭವಿಸಿದೆ. ಈಗ ಕಾಫಿ ಬೆಳೆಯ ಕೊಯ್ಲು ಇರುವುದರಿಂದ ಮಳೆಯಿಂದ ನೆಲಕ್ಕೆ ಕಾಫಿ ಹಣ್ಣು ಬೀಳುವ ಸಂಭವವಿದೆ. ಒಟ್ಟಾರೆ ಕಾಫಿ ಬೆಳೆಗಾರರಿಗೂ ಚಂಡಮಾರುತದ ಪೆಟ್ಟು ತಗಲಿದೆ. ಭತ್ತದ ಕೃಷಿಯ ನಷ್ಟ ಸಂಭವಿಸಿದ ರೈತರನ್ನು ಗುರುತಿಸಿ ಸರಕಾರ ಪರಿಹಾರದತ್ತ ಸೂಕ್ತ ವ್ಯವಸ್ಥೆ ಮಾಡಬೇಕೆಂದು ರೈತರು ಸರಕಾರವನ್ನು ಒತ್ತಾಯಿಸಿದ್ದಾರೆ.
ಚಂಡಮಾರುತದ ಪರಿಣಾಮದಿಂದ ಭತ್ತದ ಕೃಷಿ ಅವಲಂಬಿಸಿ ಬದುಕುತ್ತಿದ್ದ ರೈತರು ಬೀದಿಪಾಲಾಗುವ ಸಂಭವವಿದೆ. ಮಳೆಯಿಂದ ಭತ್ತ ಕೃಷಿಯ ಬೆಳೆಗಾರರು ಭತ್ತ ಕೊಯ್ಲು ಮಾಡಿ ಸಂಕಷ್ಟಕ್ಕೆ ಎದುರಾಗಿದ್ದಾರೆ. ಸರಕಾರ ಸಣ್ಣ ರೈತರ ಸಮಸ್ಯೆಗಳಿಗೆ ಮಧ್ಯ ಪ್ರವೇಶಿಸಿ ನಷ್ಟದ ಪರಿಹಾರ ನೀಡುವಲ್ಲಿ ಸಹಕರಿಸಬೇಕು. ಭತ್ತದ ಬೆಳೆಯ ನಷ್ಟ ಸಂಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.







