ಶಿವಮೊಗ್ಗ: ಕಾಮಗಾರಿ ನಡೆಸದೆ ಲಕ್ಷಗಟ್ಟಲೆ ರೂ. ಗುಳುಂ
ಮಹಾನಗರಪಾಲಿಕೆ ಹಗರಣ
ಶಿವಮೊಗ್ಗ, ಡಿ. 14: ಪ್ರಸ್ತುತ ಸರಕಾರಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಅಕ್ರಮ ತಡೆಗೆ ಆಡಳಿತ ವ್ಯವಸ್ಥೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಇಷ್ಟೆಲ್ಲದರ ಹೊರತಾಗಿಯೂ ಸದ್ದುಗದ್ದಲವಿಲ್ಲದೆ ಅಕ್ರಮಗಳು ನಡೆದುಕೊಂಡು ಬರುತ್ತಿವೆ. ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿಯೂ ಗೋಲ್‌ಮಾಲ್‌ವೊಂದು ಬೆಳಕಿಗೆ ಬಂದಿದ್ದು, ಕಾಮಗಾರಿ ನಡೆಸದೆಯೇ ಲಕ್ಷ ಲಕ್ಷ ರೂ. ಗುಳುಂ ಮಾಡಿರುವ ಸಂಗತಿ ಬಯಲಾಗಿದೆ!
ನಕಲಿ ಬಿಲ್ ಸೃಷ್ಟಿಸಿ, ಇನ್ಯಾವುದೋ ಕಾಮಗಾರಿಗಳ ಫೋಟೊ ಲಗತ್ತಿಸಿ ನಾಗರಿಕರ ಅಮೂಲ್ಯ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗಿದೆ. ಇದರಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕೆಲ ಜನಪ್ರತಿನಿಧಿಗಳು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗುತ್ತಿವೆ.
ಈ ಗೋಲ್‌ಮಾಲ್‌ಗೆ ಸಂಬಂಧಿಸಿದಂತೆ ಕಳೆದ ಕೆಲ ತಿಂಗಳುಗಳ ಹಿಂದೆ ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪೌರಾಡಳಿತದ ನಿರ್ದೇಶನದಂತೆ ಸ್ಥಳೀಯ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಯು ಮಹಾನಗರ ಪಾಲಿಕೆ ಆಯುಕ್ತರಿಗೆ ವರದಿ ಕಳುಹಿಸಿ, ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ನಗರಾಭಿವೃದ್ಧಿ ಕೋಶದಿಂದ ಆದೇಶವಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಮಹಾನಗರ ಪಾಲಿಕೆಯು ಅಕ್ರಮದ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವ ಗೋಜಿಗೆ ಹೋಗಿಲ್ಲವೆಂದು ಹೇಳಲಾಗುತ್ತಿದೆ. ಅಕ್ರಮದಲ್ಲಿ ಭಾಗಿಯಾದವರ ರಕ್ಷಣೆ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಇದು ಪಾಲಿಕೆ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಏನೀದು ಗೋಲ್‌ಮಾಲ್?: 2008-09, 2009-10, 2010-11 ನೆ ಸಾಲಿನಲ್ಲಿ ಪರಿಶಿಷ್ಟ ಜಾತಿ-ಪಂಗಡ ನಿಧಿ, ಸಾಮಾನ್ಯ ನಿಧಿಯಡಿ ವಿವಿಧ ಕಾಮಗಾರಿಗಳಿಗೆ ಮಂಜೂರಾದ ಹಣ ದುರ್ಬಳಕೆಯಾದ ಆರೋಪ ಇದಾಗಿದೆ. ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ, ಬೇರೆಲ್ಲೋ ನಡೆದ ಕಾಮಗಾರಿಯ ಫೋಟೊ ಲಗತ್ತಿಸಿ ಹಣ ಬಿಡುಗಡೆ ಮಾಡಿಕೊಳ್ಳಲಾಗಿರುವುದು ಈ ಗೋಲ್‌ಮಾಲ್‌ನ ಮುಖ್ಯಾಂಶವಾಗಿದೆ.
2010-11 ನೆ ಸಾಲಿನಲ್ಲಿ ಶೇ. 18 ರ ನಿಧಿಯಡಿ ವಾರ್ಡ್ ನಂಬರ್ 6 ರಲ್ಲಿ 5 ಲಕ್ಷ ರೂ. ಡಾಂಬರೀಕರಣ ಕಾಮಗಾರಿ, 2009-10 ನೇ ಸಾಲಿನ ಸಾಮಾನ್ಯ ನಿಧಿಯಲ್ಲಿ ದಾಮೋದರ ಕಾಲನಿ ಹಾಗೂ ಕೆಎಚ್‌ಬಿ ಕಾಲನಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮಂಜೂರಾದ 10 ಲಕ್ಷ ರೂ., ಅದೇ ಸಾಲಿನಲ್ಲಿ ಸಾಮಾನ್ಯ ನಿಧಿಯಡಿ ವಿನೋಬನಗರ ಬಡಾವಣೆಯ ಎ,ಬಿ,ಸಿ ಬ್ಲಾಕ್‌ಗಳಲ್ಲಿ ರಸ್ತೆ ಡಾಂಬರೀಕರಣಕ್ಕೆ ಬಿಡುಗಡೆಯಾದ 9 ಲ.ರೂ., ಸಾಮಾನ್ಯ ನಿಧಿಯಡಿ ಮಲವಗೊಪ್ಪ, ಬಸವದಳದಿಂದ ಕಾಶೀಪುರ ರಸ್ತೆಯ ಅಭಿವೃದ್ಧ್ದಿಗೆ 7.30 ಲ.ರೂ. ಹಾಗೂ 9ಲಕ್ಷರೂ.ಬಿಡುಗಡೆಯಾಗಿತ್ತು. ಆದರೆ ಇವ್ಯಾವುದೇ ಕಾಮಗಾರಿಗಳು ನಡೆದೇ ಇರಲಿಲ್ಲ. ಪಾಲಿಕೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಕಾಮಗಾರಿನಡೆದಿರುವ ನಕಲಿ ಬಿಲ್, ಫೋಟೊಗಳನ್ನು ರೂಪಿಸಿ ಹಣ ಬಿಡುಗಡೆ ಮಾಡಿದ್ದರು. ಯಾವುದೋ ಕಾಮಗಾರಿಯ ಫೋಟೊಗಳನ್ನು ಲಗತ್ತಿಸಲಾಗಿತ್ತು.
ಕೆಲ ಕಾಮಗಾರಿಗಳಿಗೆ ಫೋಟೊಗಳನ್ನು ಕೂಡ ಲಗತ್ತಿಸದಿರುವುದು ಕಂಡು
ಬಂದಿತ್ತು ಎನ್ನಲಾಗಿದೆ. ಈ ಅಕ್ರಮದ ಬಗ್ಗೆ ಕೆಲವರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಸಂಗ್ರಹಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ನಿರ್ದೇಶ ನಾಲಯವು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರಗಿಸಿ, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಸೂಚನೆ ನೀಡಿತ್ತು. ಈ ಸೂಚನೆ ಹೊರಡಿಸಿ ಹಲವು ತಿಂಗಳಾದರೂ ಇಲ್ಲಿಯವರೆಗೂ ಮಹಾನಗರ ಪಾಲಿಕೆ ಆಡಳಿತವು ಹಗರಣದ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲವೆಂದು ತಿಳಿದುಬಂದಿದೆ.
ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಒಂದೇ ಕಾಮಗಾರಿಗೆ, ಮೂರು ಬಿಲ್‌ಗಳು ಒಂದೇ ಕಾಮಗಾರಿಯ ಫೋಟೊ ಲಗತ್ತಿಸಿ ಮೂರು ಬಿಲ್‌ಗಳನ್ನು ಸೃಷ್ಟಿಸಿ, ಲಕ್ಷ ಲಕ್ಷ ರೂ. ಎತ್ತಿರುವ ಪ್ರಕರಣ ಕೂಡ ಮಹಾನಗರ ಪಾಲಿಕೆಯಲ್ಲಿ ನಡೆದಿದೆ! ನಗರದ ಬಡಾವಣೆಯೊಂದರಲ್ಲಿ ನಿರ್ಮಿಸಲಾಗಿದ್ದ ರಸ್ತೆಯ ಡಾಂಬರೀಕರಣದ ಫೋಟೊವನ್ನೇ ಇತರಡೆ ನಡೆಸಿದ ಕಾಮಗಾರಿಯ ಫೋಟೊವೆಂದು ನಂಬಿಸಿ ಗುತ್ತಿಗೆದಾರರು ಹಣ ಪಡೆದಿದ್ದಾರೆ. ಇದಕ್ಕೆ ಪಾಲಿಕೆ ಅಧಿಕಾರಿಗಳು ಕೂಡ ಕಣ್ಮುಚ್ಚಿ ಸಹಿ ಹಾಕಿದ್ದಾರೆ. ಸಂಬಂಧಿಸಿದ ವಾರ್ಡ್‌ಗಳ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ ಎನ್ನಲಾಗಿದೆ. ಪ್ರಸ್ತುತ ಮಹಾನಗರ ಪಾಲಿಕೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ನಡೆದಿರುವ ಗೋಲ್‌ಮಾಲ್ ಪ್ರಕರಣವು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.







