ಕಡೂರು: ಗ್ರಾಮಸ್ಥನ ಮೇಲೆ ಕರಡಿ ದಾಳಿ
ಕಡೂರು, ಡಿ.14: ತಾಲೂಕಿನ ವನಬೋಗಿಹಳ್ಳಿಯಲ್ಲಿ ಕರಡಿ ದಾಳಿಗೆ ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಚಿಕ್ಕವೀರಯ್ಯ(55) ಕರಡಿ ದಾಳಿಗೆ ಒಳಗಾದ ವ್ಯಕ್ತಿ. ವನಬೋಗಿಹಳ್ಳಿಯ ತನ್ನ ತೋಟಕ್ಕೆ ಹೋದ ಚಿಕ್ಕವೀರಯ್ಯನ ಮೇಲೆ ಕರಡಿ ಏಕಾಏಕಿ ದಾಳಿ ಮಾಡಿದ್ದು, ಚಿಕ್ಕವೀರಯ್ಯನ ಬೆನ್ನು ಮತ್ತು ಕಾಲಿಗೆ ಗಾಯಗಳಾಗಿವೆ. ದಾಳಿಗೆ ಪ್ರತಿರೋಧ ತೋರಿದಾಗ ಕರಡಿ ಹತ್ತಿರದ ಕಾಡು ಪ್ರದೇಶಕ್ಕೆ ಪರಾರಿಯಾಗಿದೆ. ಕರಡಿ ಜೊತೆ ಇನ್ನೆರಡು ಮರಿಕರಡಿಗಳಿದ್ದವು ಎಂದು ತಿಳಿದು ಬಂದಿದ್ದು, ಗಾಯಾಳುವನ್ನು ಗ್ರಾಮಸ್ಥರು ಕಡೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕ್ಕವೀರಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಚಿಕ್ಕವೀರಯ್ಯನ ಸಂಬಂಧಿ ವೀರಭದ್ರಯ್ಯ ಎಂಬವರ ಮೇಲೆಯೂ ಕರಡಿ ದಾಳಿ ನಡೆಸಿತ್ತು. ಅದಕ್ಕೂ ಹಿಂದೆ ಇದೇ ಗ್ರಾಮದಲ್ಲಿ ವೃದ್ಧೆಯೊಬ್ಬರು ಕರಡಿ ದಾಳಿಗೊಳಗಾಗಿ ಮೃತಪಟ್ಟಿದ್ದರು. ಈ ರೀತಿ ದಾಳಿಗೊಳಗಾದಾಗ ಅರಣ್ಯ ಇಲಾಖೆಯವರು ಕರಡಿಗಳನ್ನು ಹಿಡಿದು ಸ್ಥಳಾಂತರಿಸುತ್ತೇವೆ ಎನ್ನುತ್ತಾರೆ. ನಂತರ ಒಂದೆರಡು ದಿನಗಳ ಬಳಿಕ ಅಲ್ಲಿಗೆ ಬರುವುದೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು, ಅರಣ್ಯ ಇಲಾಖೆಯವರು ಈ ಕೂಡಲೇ ಕರಡಿ ದಾಳಿಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಮೂರು ತಿಂಗಳಲ್ಲಿ ಮೂರನೆ ಬಾರಿಗೆ ಕರಡಿ ದಾಳಿಯ ಘಟನೆಗಳು ನಡೆದಿದೆಯಾದರೂ ಸಂತ್ರಸ್ತರಿಗೆ ಯಾವುದೇ ರೀತಿಯ ಪರಿಹಾರಸಿಕ್ಕಿಲ್ಲ. ಈ ಕೂಡಲೇ ಕರಡಿ ದಾಳಿಗೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.







