ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ಫೈನಲ್‌ಗೆ

ಹೊಸದಿಲ್ಲಿ, ಡಿ.14: ಆತಿಥೇಯ ಡೆಲ್ಲಿ ಡೈನಮೊಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-0 ಗೋಲುಗಳಿಂದ ಮಣಿಸಿದ ಕೇರಳ ಬ್ಲಾಸ್ಟರ್ಸ್ ತಂಡ ಇಂಡಿಯನ್ ಸೂಪರ್ ಫುಟ್ಬಾಲ್ ಲೀಗ್(ಐಎಸ್‌ಎಲ್)ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
ಬುಧವಾರ ರಾತ್ರಿ ಇಲ್ಲಿ ನಡೆದ ಐಎಸ್‌ಎಲ್‌ನ 2ನೆ ಚರಣದ ಸೆಮಿ ಫೈನಲ್ ಪಂದ್ಯದಲ್ಲಿ ದಿಲ್ಲಿ ತಂಡ ನಿಗದಿತ ಸಮಯದಲ್ಲಿ 2-1ರಿಂದ ಮುನ್ನಡೆ ಸಾಧಿಸಿತ್ತು. ಆದರೆ, ಮೊದಲ ಚರಣವನ್ನು ಕೇರಳ ತಂಡ 1-0 ಅಂತರದಿಂದ ಜಯಿಸಿದ ಕಾರಣ ಗೋಲು ಸರಾಸರಿಯಲ್ಲಿ 2-2 ರಿಂದ ಸಮಬಲ ಸಾಧಿಸಿತು.
ಹೆಚ್ಚುವರಿ ಸಮಯದ 30 ನಿಮಿಷದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. ಈ ಹಿನ್ನೆಲೆಯಲ್ಲಿ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ವಿಸ್ತರಿಸಲ್ಪಟ್ಟಿತು. ಪೆನಾಲ್ಟಿಯಲ್ಲಿ 3-0 ಅಂತರದಿಂದ ಜಯ ಸಾಧಿಸಿರುವ ಕೇರಳ ತಂಡ ಫೈನಲ್‌ಗೆ ತಲುಪಿದೆ.
ಕೇರಳ ತಂಡ ಡಿ.18 ರಂದು ನಡೆಯಲಿರುವ ಐಎಸ್‌ಎಲ್ ಫೈನಲ್‌ನಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ(ಎಟಿಕೆ) ತಂಡವನ್ನು ಎದುರಿಸಲಿದೆ. ಕೇರಳದ ಪರ ಜೋಸ್ ಪ್ರೈಟೊ, ಕೇರ್ವೆನ್ಸ್ ಬೆಲ್ಫೋರ್ಟ್ ಹಾಗೂ ಮುಹಮ್ಮದ್ ರಫೀಕ್ ತಲಾ ಒಂದು ಗೋಲು ಬಾರಿಸಿದರು.
ಇದಕ್ಕೆ ಮೊದಲು ನಡೆದ ನಿಗದಿತ ಸಮಯದ ಪಂದ್ಯದಲ್ಲಿ ಡೆಲ್ಲಿಯ ಪರ ಮಾರ್ಸೆಲಿನ್ಹೊ ಪೆರೇರ(21ನೆ ನಿ.) ಹಾಗೂ ರೂಬೆನ್ ರೊಚಾ(45ನೆ ನಿ.) ತಲಾ ಒಂದು ಗೋಲು ಬಾರಿಸಿದರು. ಕೇರಳದ ಪರ ಡೆಕೆನ್ಸ್ ನರೊನ್ ಏಕೈಕ ಗೋಲು ಬಾರಿಸಿದರು.
ಮಂಗಳವಾರ ಮುಂಬೈನಲ್ಲಿ ನಡೆದ 2ನೆ ಚರಣದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಮುಂಬೈ ಸಿಟಿ-ಕೋಲ್ಕತಾ ನಡುವಿನ ಪಂದ್ಯ ಗೋಲುರಹಿತ ಡ್ರಾಗೊಂಡಿದ್ದು, ಕೋಲ್ಕತಾ ಗೋಲು ಸರಾಸರಿಯಲ್ಲಿ ಫೈನಲ್‌ಗೆ ತಲುಪಿತ್ತು.







