ಬ್ಯಾಂಕಿಗೇ ಐಟಿ ರೇಡ್ !
60 ಕೋಟಿ ಕಪ್ಪು ಹಣ ಪತ್ತೆ

ನೊಯ್ಡ(ಉ.ಪ್ರ),ಡಿ.15: ನೊಯ್ಡದ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಮೇಲೆ ಇಂದು ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು 20 ನಕಲಿ ಖಾತೆಗಳಲ್ಲಿ ಠೇವಣಿ ಯಿರಿಸಲಾಗಿದ್ದ 60 ಕೋ.ರೂ. ಕಪ್ಪುಹಣವನ್ನು ಪತ್ತೆ ಹಚ್ಚಿದ್ದಾರೆ.
ಕಡಿಮೆ ಆದಾಯದ ನೌಕರರು ಮತ್ತು ಕಾರ್ಮಿಕರ ಹೆಸರುಗಳಲ್ಲಿ ತೆರೆಯಲಾಗಿದ್ದ ಈ ಖಾತೆಗಳಲ್ಲಿ ವ್ಯವಸ್ಥಿತವಾಗಿ ಹಣವನ್ನು ಜಮೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿದವು
ನ.8ರಂದು 500 ಮತ್ತು 1,000 ರೂ.ನೋಟುಗಳು ರದ್ದಾದ ಬಳಿಕ ನೊಯ್ಡಾದ ಚಿನ್ನಾಭರಣಗಳ ವ್ಯಾಪಾರಿಯೋರ್ವ 600 ಕೋ.ರೂ.ಲ್ಯದ ಚಿನ್ನವನ್ನು ಮಾರಾಟ ಮಾಡಿ ಹಣವನ್ನು ನೊಯ್ಡಾ ಶಾಖೆಯಲ್ಲಿ ಜಮಾ ಮಾಡಿದಾಗ ಈ ನಕಲಿ ಖಾತೆಗಳು ಐಟಿ ಅಧಿಕಾರಿಗಳ ಗಮನಕ್ಕೆ ಬಂದಿದ್ದವು.
ಮಧ್ಯಾಹ್ನವೂ ದಾಳಿ ಕಾರ್ಯಾಚರಣೆ ಮುಂದುವರಿದಿದ್ದು, ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕಿನ ಹೊರಗೆ ಸೇರಿದ್ದಾರೆ. ಬ್ಯಾಂಕಿನ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ನಕಲಿ ಖಾತೆಗಳು ಪತ್ತೆಯಾಗಿರುವುದು ಇದೇ ಮೊದಲ ಬಾರಿಯೇನಲ್ಲ. ಕೆಲವು ದಿನಗಳ ಹಿಂದೆ ದಿಲ್ಲಿಯ ಚಾಂದನಿ ಚೌಕ್‌ನ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಐಟಿ ದಾಳಿಯ ಸಂದರ್ಭ 44 ಶಂಕಿತ ಖಾತೆಗಳಲ್ಲಿ 100 ಕೋ.ರೂ.ಗೂ ಹೆಚ್ಚಿನ ಹಣ ಪತ್ತೆಯಾಗಿತ್ತು. ಜಾರಿ ನಿರ್ದೇಶನಾಲಯವು ತನ್ನ ಇಬ್ಬರು ಮ್ಯಾನೇಜರ್‌ಗಳನ್ನು ಬಂಧಿಸಿದ ಬಳಿಕ ಆ್ಯಕ್ಸಿಸ್ ಬ್ಯಾಂಕ್ 16 ನೌಕರರನ್ನು ಅಮಾನತುಗೊಳಿಸಿದೆ. ಖಾಸಗಿ ಕ್ಷೇತ್ರದಲ್ಲಿ ದೇಶದ ಮೂರನೇ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಆ್ಯಕ್ಸಿಸ್‌ಬ್ಯಾಂಕಿನಲ್ಲಿ ನೋಟು ವಿನಿಮಯಕ್ಕೆ ಸಂಬಂಧಿಸಿದ ಹಲವಾರು ಅಕ್ರಮಗಳು ಪತ್ತೆಯಾದ ಬಳಿಕ ಸರಕಾರವು ಎಲ್ಲವನ್ನೂ ಕ್ರಮಬದ್ಧವಾಗಿರಿಸಿಕೊಳ್ಳುವಂತೆ ಈಗಾಗಲೇ ಬ್ಯಾಂಕಿಗೆ ಸೂಚಿಸಿದೆ.
ಆದರೆ ಸರಕಾರದಿಂದ ಇಂತಹ ಯಾವುದೇ ಸಂದೇಶ ಅಥವಾ ಸಲಹೆ ಬಂದಿರುವುದನ್ನು ಬ್ಯಾಂಕು ನಿರಾಕರಿಸಿದೆ.







