ಬೀದಿಬದಿ ವ್ಯಾಪಾರಸ್ಥರಿಂದ ಸಂಭ್ರಮಾಚರಣೆ
.jpg)
ಮಂಗಳೂರು, ಡಿ.15 : ನಗರದ ಹೃದಯಭಾಗದಲ್ಲಿ ಬೀದಿಬದಿ ವ್ಯಾಪಾರಸ್ಥರಿಗಾಗಿ ಮನಪಾ ‘ವ್ಯಾಪಾರಸ್ಥರ ವಲಯ’ ರಚಿಸಿರುವುದನ್ನು ಸ್ವಾಗತಿಸಿರುವ ಸಿಐಟಿಯು ಸಂಯೋಜಿತ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಧರ ಸಂಘ, ಇದು ಸಂಘದ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿ ಗುರುವಾರ ಸಿಹಿತಿಂಡಿ ಹಂಚಿ ಸಂಭ್ರಮಿಸಿತು.
ಈ ಸಂದರ್ಭ ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಆರು ವರ್ಷಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತದ ಮನೋಭಾವ, ಆರೋಪಗಳು, ಅಮಾನವೀಯ ದಾಳಿಗಳು, ಟೈಗರ್ ಕಾರ್ಯಚರಣೆಗಳು ಅವ್ಯಾಹತವಾಗಿ ನಡೆಯುತ್ತಿದ್ದುದನ್ನು ನೆನಪಿಸಿದರು.
ಇಂತಹ ಸಂದರ್ಭದಲ್ಲಿ ಭುಗಿಲೆದ್ದ ಆಕ್ರೋಶಗಳು ಸಂಘಟನಾ ರೂಪವನ್ನು ಪಡೆದು ಹೋರಾಟಗಳಿಗೆ ನಾಂದಿ ಹಾಡಿತು. ಹೋರಾಟದ ಕಿಡಿಯಿಂದಲೇ ಜನ್ಮ ತಾಳಿದ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯು ಹಂತ ಹಂತವಾಗಿ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡಿದುದರ ಫಲವಾಗಿ ಇಂದು ಪ್ರತ್ಯೇಕ ವಲಯ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು.
ದ.ಕ. ಜಿಲ್ಲಾ ಬೀದಿಬದಿ ವ್ಯಾಪಾಸ್ಥರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಈಗಾಗಲೇ 208 ಮಂದಿಗೆ ಪ್ರಥಮ ಹಂತದಲ್ಲಿ ಮನಪಾ ಗುರುತು ಚೀಟಿ ನೀಡಿದೆ. 2ನೆ ಹಂತದಲ್ಲಿ 350 ಮಂದಿಗೆ ಗುರುತು ಚೀಟಿ ನೀಡಲು ಬಾಕಿಯಿದೆ. ಆವರೆಗೆ ಮನಪಾ ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸಬಾರದು ಎಂದು ಒತ್ತಾಯಿಸಿದರು.
ಕಾರ್ಪೊರೇಟರ್ ದಯಾನಂದ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕಿ ರೀಟಾ ನೊರೋನ್ಹಾ, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತ್ತಿಯಾಝ್, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಲಿಂಗಪ್ಪನಂತೂರು ಮಾತನಾಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಆರ್. ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಶಕ್ತಿನಗರ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡ ಮುಹಮ್ಮದ್ ಮುಸ್ತಫಾ, ಅಥಾವುಲ್ಲಾ, ಆಸೀಫ್, ಸಿಕಂದರ್, ಅಣ್ಣಯ್ಯ, ಶ್ರೀಧರ, ಹರೀಶ್, ಹಸನ್, ಝಾಕಿರ್ ಹುಸೈನ್, ಮೇರಿ ಡಿಸೋಜ, ಫಿಲೋಮಿನಾ, ಮೇಬಲ್ ಡಿಸೋಜ, ಆದಂ ಬಜಾಲ್ ಪಾಲ್ಗೊಂಡಿದ್ದರು.







