ಅಫಿದಾವಿತ್‌ನಲ್ಲಿ ಸುಳ್ಳು ಸಾಕ್ಷ ನೀಡಿದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್
ಕ್ಷಮೆ ಕೋರುವಂತೆ ಸುಪ್ರೀಂಕೋರ್ಟ್ ತಾಕೀತು

ಹೊಸದಿಲ್ಲಿ, ಡಿ.16: ಬಿಸಿಸಿಐ ಹಾಗೂ ಲೋಧಾ ಸಮಿತಿ ಪ್ರಕರಣದ ಸಂಬಂಧಿಸಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಸುಳ್ಳು ಸಾಕ್ಷ ನೀಡಿರುವುದು ಸಾಬೀತಾಗಿದೆ. ಈ ತಪ್ಪಿಗೆ ಠಾಕೂರ್ ಜೈಲು ಪಾಲಾಗಬೇಕು ಇಲ್ಲವೇ ನ್ಯಾಯಾಲಯದ ಕ್ಷಮೆ ಕೋರಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಬಿಸಿಸಿಐ ಪರ ವಕೀಲರಾದ ಕಪಿಲ್ ಸಿಬಲ್ ವಿಚಾರಣೆ ವೇಳೆ ಹಾಜರಿದ್ದು, ತಾವು ಕ್ಷಮೆ ಯಾಚಿಸಲು ಸಿದ್ಧ ಎಂದು ಹೇಳಿದ್ದಾರೆ. ಬಿಸಿಸಿಐ ತಾನು ಶಿಫಾರಸು ಮಾಡಿರುವ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಲೋಧಾ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರ ಕೈಗೆತ್ತಿಕೊಂಡಿತು.
ಲೋಧಾ ಸಮಿತಿಯ ಶಿಫಾರಸಿನ ಬಗ್ಗೆ ಐಸಿಸಿ ಮುಖ್ಯಕಾರ್ಯಾಧ್ಯಕ್ಷ ರಿಚರ್ಡ್‌ಸನ್‌ರೊಂದಿಗೆ ನಡೆಸಿದ ಮಾತುಕತೆಯ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಅಕ್ಟೋಬರ್‌ನಲ್ಲಿ ನೀಡಿದ ಆದೇಶದಲ್ಲಿ ಠಾಕೂರ್‌ಗೆ ತಿಳಿಸಿತ್ತು. ಬಿಸಿಸಿಐನಲ್ಲಿ ಸಿಎಜಿ ನೇಮಕ ಮಾಡಬೇಕೆಂದು ಲೋಧಾ ಸಮಿತಿಯ ಶಿಫಾರಸಿನ ಸಂಬಂಧ ಐಸಿಸಿಯನ್ನು ಠಾಕೂರ್ ಸಂಪರ್ಕಿಸಿದ್ದರು.
ನಾನು ಐಸಿಸಿಯಿಂದ ಪತ್ರ ನೀಡುವಂತೆ ಕೇಳಿಲ್ಲ. ಲೋಧಾ ಸಮಿತಿಯ ಸುಧಾರಣೆಗಳನ್ನು ಜಾರಿಗೆ ತಂದರೆ ಬಿಸಿಸಿಐನ ಆಡಳಿತದಲ್ಲಿ ಸರಕಾರ ಮಧ್ಯಪ್ರವೇಶ ಮಾಡಿದಂತಾಗುತ್ತದೆಯೇ ಎಂಬ ಬಗ್ಗೆ ಐಸಿಸಿ ಚೇರ್ಮನ್ ಬಳಿ ಸ್ಪಷ್ಟೀಕರಣ ಕೇಳಿದ್ದೆ ಎಂದು ಅಫಿದಾವಿತ್‌ನಲ್ಲಿ ಠಾಕೂರ್ ತಿಳಿಸಿದ್ದಾರೆ. ಐಸಿಸಿ ಚೇರ್ಮನ್ ಮನೋಹರ್‌ರಿಂದ ಅಭಿಪ್ರಾಯ ಕೇಳಿದ್ದೇನೆ ಎಂದು ಅಫಿದಾವಿತ್‌ನಲ್ಲಿ ಸುಳ್ಳು ಸಾಕ್ಷ ಹೇಳಿದ್ದಾರೆ ಎಂದು ಲೋಧಾ ಸಮಿತಿ ಪರ ವಾದಿಸಿದ ಸುಬ್ರಹ್ಮಣ್ಯ ಅವರು ಜಸ್ಟಿಸ್ ಟಿಎಸ್ ಠಾಕೂರ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.
ಬಿಸಿಸಿಐಗೆ ಸ್ವತಂತ್ರ ಆಡಿಟರ್ ಜನರಲ್‌ರನ್ನು ನೇಮಕ ಮಾಡಬೇಕೆಂಬ ಲೋಧಾ ಸಮಿತಿಯ ಶಿಫಾರಸಿನ ಬಗ್ಗೆ ಇನ್ನೊಂದು ವಾರದಲ್ಲಿ ಅಭ್ಯರ್ಥಿಯ ಹೆಸರನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಲೋಧಾ ಸಮಿತಿಯ ಕೇಂದ್ರ ಮಾಜಿ ಗೃಹ ಕಾರ್ಯದರ್ಶಿ ಪಿ.ಕೆ. ಪಿಳ್ಳೈ ಅವರನ್ನು ಸ್ವತಂತ್ರ ಆಡಿಟರ್ ಜನರಲ್ ನೇಮಕ ಮಾಡಬೇಕೆಂದು ಮನವಿ ಮಾಡಿತ್ತು. ಇದಕ್ಕೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜ.3ಕ್ಕೆ ಮುಂದೂಡಿದೆ.







