ಮಂಗಳೂರು ವಿವಿಯಲ್ಲಿ ಕನಕ ಚಿಂತನ ಪ್ರಚಾರೋಪನ್ಯಾಸ

ಕೊಣಾಜೆ, ಡಿ.15 : ಸಮಾಜ ಮಹಿಳೆಯನ್ನು ಸನ್ಯಾಸಿಯಾಗಲು ಅವಕಾಶ ಕೊಡದಿರುವ ಕಾಲಘಟ್ಟದಲ್ಲಿ ಕೆಲವು ಕೆಳ ಜಾತಿಗೆ ಸೇರಿದ ಸಾಮಾನ್ಯ ಮಹಿಳೆಯರು ಭಕ್ತಿಯ ಪರಂಪರೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಕಾರಣಕರ್ತರಾದರು. ಭಕ್ತಿಗೆ ಲಿಂಗ ಅಥವಾ ಜಾತಿಯ ಹಂಗಿಲ್ಲ ಎಂದು ದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಪ್ರೊ. ವಿಜಯಾ ರಾಮಸ್ವಾಮಿ ಅವರು ಅಭಿಪ್ರಾಯ ಪಟ್ಟರು.
ಮಂಗಳೂರು ವಿವಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ವಿವಿಯ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಗುರುವಾರ ನಡೆದ ಕನಕ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ 2016-17 ‘ಭಕ್ತಿ ಪರಂಪರೆ-ಮರು ಪರಿಶೀಲನೆ ' ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಲ್ಲಿದ್ದ ಮೇಲು ಕೀಳು, ಜಾತಿ ಬೇಧ ಭಾವವನ್ನು ದೂರಗೊಳಿಸಿ ಜಾತ್ಯಾತೀತ ಸಮಾಜವನ್ನು ಕಟ್ಟುವ ದಿಸೆಯಲ್ಲಿ ಕನಕದಾಸರ ಹೋರಾಟ ಮಹತ್ತರವಾದುದು. ಆದುದರಿಂದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ‘ಲೌಕಿಕ ಆಧ್ಯಾತ್ಮ ಕನಕನ ನೆಲೆ ಕುರಿತಾಗಿ ಮಾತನಾಡಿ, ಕನಕದಾಸರಿಗೆ ಸಿದ್ಧವಾದ ಒಂದು ಸಂಗತಿಯಲ್ಲಿ ತಾನು ಕಂಡ ಅನುಭವವನ್ನು ವರ್ಣಿಸುವುದಕ್ಕೆ ಅದರ ಪರಿಕರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ದೇವರ ಜೊತೆ ಮಾತನಾಡುವಾಗ ಅಲ್ಲಮ ತಾನು ಆರಾಧಿಸಿಕೊಂಡು ಬಂದ ಗುಹೇಶ್ವರ ಒಂದು ಕಡೆ ಸತ್ತ ಎಂದು ಹೇಳುತ್ತಾರೆ. ಅಲ್ಲಮನಿಗೆ ನಾಮದ ಹಂಗಿಲ್ಲ. ಆದರೆ ದಾಸರಿಗೆ ನಾಮದ ಬಲ. ಅಲ್ಲಮನಂತೆ ಕನಕದಾಸರಿಗೆ ಭಾಷೆ ಎಂಬುದು ಪ್ರಾಣಘಾತಕವಲ್ಲ . ದಾಸಪಂಥದಲ್ಲಿ ಅಲ್ಲಮನಂತಹವರ ಒಬ್ಬರ ಅಗತ್ಯವಿತ್ತು ಎಂದು ನುಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಕೆ. ಶಿವರಾಮ ಶೆಟ್ಟಿ , ರಾಜ್ಯಾದಂತ ಶಿಕ್ಷಣ ಸಂಸ್ಥೆಗಳು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕನಕನ ಲೋಕ ಸಂಚಾರ, ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಹಳೆ ವಿದ್ಯಾರ್ಥಿನಿ ಶ್ರೀದೇವಿ ದಾಸರ ಪದ ಹಾಡಿದರು. ಹನುಮಂತಪ್ಪ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು.







