ಸಂಬಳ ಪಾವತಿಗೆ ನಗದು ರಹಿತ ವಿಧಾನ : ಮಸೂದೆ ಮಂಡನೆ

ಹೊಸದಿಲ್ಲಿ, ಡಿ.15: ನೋಟು ಅಮಾನ್ಯಗೊಳಿಸಿದ ಬಳಿಕ ಕೇಂದ್ರ ಸರಕಾರವು ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡುತ್ತಿರುವಂತೆಯೇ ಕೆಲವು ಉದ್ದಿಮೆಗಳು ಮತ್ತು ಕೈಗಾರಿಕೆಗಳಲ್ಲಿ ಸಿಬ್ಬಂದಿಗಳಿಗೆ ಚೆಕ್ ಅಥವಾ ಇಲೆಕ್ಟ್ರಾನಿಕ್ಸ್ ಮಾಧ್ಯಮದ ಮೂಲಕ ಸಂಬಳ ಪಾವತಿಸಲು ಅವಕಾಶ ಮಾಡಿಕೊಡುವ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾಗಿದೆ.
ಲೋಕಸಭೆಯಲ್ಲಿ ನೋಟು ಅಮಾನ್ಯದ ಗದ್ದಲದ ನಡುವೆಯೇ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಮಸೂದೆಯನ್ನು ಮಂಡಿಸಿದರು. ಈ ಹಿಂದೆ ಅಂಗೀಕಾರಗೊಂಡಿದ್ದ ಸಂಬಳ ಪಾವತಿಸುವ (ತಿದ್ದುಪಡಿ) ಮಸೂದೆ 2016ರ ಸೆಕ್ಷನ್ 6ಕ್ಕೆ ತಿದ್ದುಪಡಿ ಮಾಡುವ ಮೂಲಕ ಸಂಬಳವನ್ನು ಚೆಕ್ ಮೂಲಕ ಅಥವಾ ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಪಾವತಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಹೊಸ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಂಬಳ ಸಿಗದಿರುವುದು ಅಥವಾ ಕಡಿಮೆ ದೊರೆತಿರುವ ದೂರುಗಳ ಬಗ್ಗೆ ಗಮನ ಹರಿಸಲು ಸುಲಭವಾಗುತ್ತದೆ.
ಈ ಕಾಯ್ದೆಗೆ ರಾಜ್ಯಮಟ್ಟದಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ ಮತ್ತು ಹರ್ಯಾನ ರಾಜ್ಯಗಳು ಈಗಾಗಲೇ ಸಿಬ್ಬಂದಿಗಳ ಸಂಬಳವನ್ನು ಚೆಕ್ ಮೂಲಕ ಪಾವತಿಸಲು ಅಥವಾ ಖಾತೆಗಳಿಗೆ ಜಮೆ ಮಾಡಲು ಅವಕಾಶ ಮಾಡಿಕೊಟ್ಟಿವೆ.





