ಪಾವೂರು ಗ್ರಾಮ ಪಂಚಾಯತ್‌ನಲ್ಲಿ ಮಹಿಳಾ ಗ್ರಾಮಸಭೆ

ಕೊಣಾಜೆ, ಡಿ.15 : ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಪ್ರಮುಖವಾದುದು. ಅಪ್ರಾಪ್ತ ವಯಸ್ಸಿನ ಮಕ್ಕಳ ಮನಸ್ಸು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ಹೆತ್ತವರು, ಪೋಷಕರು ಮಕ್ಕಳ ಬಗ್ಗೆ ನಿಗಾ ಇಟ್ಟು ಬುದ್ಧವಾರ ಹೇಳುವುದು ಅಗತ್ಯ ಎಂದು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಶೃತಿ ಎನ್.ಎಸ್. ಅಭಿಪ್ರಾಯಪಟ್ಟರು.
ಪಾವೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕ ಸಬಲೀಕರಣವಾಗುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಅರುಣಾ ಶ್ಯಾನ್‌ಭಾಗ್ ಪ್ರಕರಣದಲ್ಲಿ ಆರೋಪಿಗೆ ಕೇವಲ ಒಂದು ವರ್ಷ ಮಾತ್ರವೇ ಶಿಕ್ಷೆಯಾಗಿತ್ತು. ಆದರೆ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರಿಗಾಗಿಯೇ ಕಠಿಣ ಕಾನೂನು ರೂಪಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯ ಮುಂತಾದ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈ ಬಗ್ಗೆ ದೂರು ನೀಡುವ ಧೈರ್ಯ ಮಹಿಳೆಯರು ಹೊಂದಿರಬೇಕು ಎಂದು ತಿಳಿಸಿದರು.
ಕೊಣಾಜೆ ಠಾಣಾಧಿಕಾರಿ ಅಶೋಕ್ ಮಾತನಾಡಿ, ಮಹಿಳೆಯರು ಎಷ್ಟು ಮುಗ್ದರಾಗಿರುತ್ತಾರೋ ಅಷ್ಟರವರೆಗೆ ದುರುಪಯೋಗಪಡಿಸುವ ಜನರಿರುತ್ತಾರೆ. ತಮ್ಮನ್ನು ಕೆಣಕುವವರಿಗೆ ಪ್ರತ್ಯುತ್ತರ ನೀಡುವ ಧೈರ್ಯ ತೋರುವ ಮಹಿಳೆಯತ್ತ ಯಾರೂ ಸುಳಿಯುವುದಿಲ್ಲ. ಇಂದು ಕಾಲ ಬದಲಾಗಿದ್ದು ಹೆಣ್ಮಕ್ಕಳ ಬಗ್ಗೆ ಹೆತ್ತವರು ವಿಶೇಷ ನಿಗಾ ಇಡಬೇಕಿದೆ, ಮಕ್ಕಳ ಚಲನವಲನದ ಬಗ್ಗೆ ನಿಗಾ ಇಡುವ ಜೊತೆ ಅವರಲ್ಲಿ ಬೆರೆಯುವುದು ಅಗತ್ಯ. ಅನಗತ್ಯವಾಗಿ ಮೊಬೈಲ್ ನೀಡುವುದರಿಂದ ಸಾಕಷ್ಟು ಅನಾಹುತಗಳು ನಡೆಯುತ್ತಲೇ ಇದೆ ಎಂದರು.
ಪಾವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಮಹಮ್ಮದ್ ಫಿರೋಜ್, ಸದಸ್ಯ ಎಂ.ಪಿ.ಹಸನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಂಕರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ದಿವ್ಯಶ್ರೀ, ಪಂಚಾಯಿತಿ ಸಿಬ್ಬಂದಿ ಚಿತ್ರಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ಚಿತ್ರಾಕ್ಷಿ ವರದಿ ವಾಚಿಸಿದರು.







