ಸೌದಿ: ನೂತನ ವಿನ್ಯಾಸದ ಕರೆನ್ಸಿ ನೋಟುಗಳು ಡಿ. 26ರರಿಂದ ಚಲಾವಣೆಗೆ

ರಿಯಾದ್, ಡಿ. 15: ಸೌದಿ ಅರೇಬಿಯದಲ್ಲಿ ಹೊಸ ವಿನ್ಯಾಸದ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಡಿಸೆಂಬರ್ 26ರಿಂದ ಚಲಾವಣೆಗೆ ಬರಲಿವೆ.
500, 100, 50, 10 ಮತ್ತು 5 ಮುಖಬೆಲೆಯ ಹೊಸ ವಿನ್ಯಾಸದ ಸೌದಿ ರಿಯಾಲ್ ನೋಟುಗಳು ಮತ್ತು 1 ಮತ್ತು 2 ಸೌದಿ ರಿಯಾಲ್ ಸೇರಿದಂತೆ ವಿವಿಧ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಹೊಸ ನೋಟುಗಳು ಮತ್ತು ನಾಣ್ಯಗಳನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.
‘‘ನೂತನ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳನ್ನು ಸೌದಿ ಅರೇಬಿಯ ಹಣಕಾಸು ಪ್ರಾಧಿಕಾರವು (ಎಸ್‌ಎಎಮ್‌ಎ)ಅಧಿಕೃತವಾಗಿ ಚಲಾವಣೆಗೆ ತರಲಿದೆ. ನೂತನ ನೋಟುಗಳು ಮತ್ತು ನಾಣ್ಯಗಳ ಜೊತೆಗೆ ಹಳೆಯ ನೋಟುಗಳು ಮತ್ತು ನಾಣ್ಯಗಳೂ ಚಲಾವಣೆಯಲ್ಲಿ ಇರಲಿವೆ’’ ಎಂದು ನೂತನ ಕರೆನ್ಸಿ ನೋಟುಗಳ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಎಮ್‌ಎ ಗವರ್ನರ್ ಅಹ್ಮದ್ ಅಲ್ಕೋಲಿಫೆ ತಿಳಿಸಿದರು.
ದೇಶದ ಇತಿಹಾಸದ ವಿವಿಧ ಅವಧಿಗಳಲ್ಲಿ ಸಾಧಿಸಲಾದ ಆರ್ಥಿಕ ಪ್ರಗತಿಯ ಚಿತ್ರಣವನ್ನು ನೂತನ ನೋಟುಗಳು ನೀಡಲಿವೆ ಎಂದು ಅಲ್ಕೋಲಿಫೆ ನುಡಿದರು.
ನೂತನ ನೋಟುಗಳನ್ನು ನಕಲಿ ಮಾಡಲು ಸಾಧ್ಯವಾಗದಂತೆ ಅದರಲ್ಲಿ ಯಂತ್ರ ಗುರುತಿಸಬಲ್ಲ ಹಲವಾರು ಭದ್ರತಾ ಅಂಶಗಳನ್ನು ಅಳವಡಿಸಲಾಗಿದೆ.
ಕಾಗದದ ರಿಯಾಲ್‌ಗಳ ಸ್ಥಾನವನ್ನು ಕ್ರಮೇಣ ನಾಣ್ಯಗಳು ಆಕ್ರಮಿಸಿಕೊಳ್ಳಲಿವೆ. ಯಾಕೆಂದರೆ ನಾಣ್ಯ ರೂಪದ ರಿಯಾಲ್‌ಗಳಿಂದ ಹಲವಾರು ಪ್ರಯೋಜನಗಳಿವೆ ಎಂದು ಎಸ್‌ಎಎಮ್‌ಎ ಮುಖ್ಯಸ್ಥ ತಿಳಿಸಿದರು.
ಕಾಗದದ ರಿಯಾಲ್‌ಗಳ ಬಾಳಿಕೆ ಅವಧಿ 12ರಿಂದ 18 ತಿಂಗಳುಗಳಾದರೆ, ನಾಣ್ಯಗಳ ಬಾಳಿಕೆ ಅವಧಿ 20ರಿಂದ 25 ವರ್ಷಗಳು ಎಂದರು.







