ರೂ.500ರ ನೋಟು ಮುದ್ರಣದತ್ತ ಸರಕಾರದ ಚಿತ್ತ: ಕಾಂತ್

ಹೊಸದಿಲ್ಲಿ, ಡಿ.15: ಸರಕಾರವೀಗ ರೂ.500 ಮುಖಬೆಲೆಯ ನೋಟುಗಳ ಮುದ್ರಣದ ಕಡೆಗೆ ಗಮನಹರಿಸಿದೆಯೆಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪೆಟ್ರೋಲ್ ಪಂಪ್ ಹಾಗೂ ಇತರ ಕೆಲವು ಸೌಲಭ್ಯಗಳಲ್ಲಿ ರೂ.500 ಹಾಗೂ 1000ದ ನೋಟುಗಳ ಬಳಕೆ ಕೊನೆಗೊಳ್ಳುವ ಕೆಲವೇ ತಾಸುಗಳ ಮುನ್ನ ಅವರು ಈ ವಿಷಯ ತಿಳಿಸಿದ್ದಾರೆ. ಡಿ.15ರ ಮಧ್ಯರಾತ್ರಿಯ ಬಳಿಕ ಡಿ.30ರ ವರೆಗೆ ಬ್ಯಾಂಕ್‌ಗಳಲ್ಲಿ ಮಾತ್ರ ಹಳೆಯ ನೋಟುಗಳನ್ನು ಠೇವಣಿಯಿರಿಸಬಹುದು.
ದೇಶದ 2.2 ಲಕ್ಷ ಎಟಿಎಂಗಳಲ್ಲಿ ಸುಮಾರು 2 ಲಕ್ಷ ಎಟಿಎಂಗಳನ್ನು ರೂ.2000 ಹಾಗೂ 500ರ ಹೊಸ ನೋಟುಗಳನ್ನು ನೀಡುವುದಕ್ಕೆ ಪರಿವರ್ತನೆ ಮಾಡಲಾಗಿದೆ ಎಂದು ದಾಸ್ ಹೇಳಿದ್ದಾರೆ.
ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಸರಕಾರವಿಂದು ಡಿ.25ರ ಕ್ರಿಸ್ಮಸ್ ದಿನದಿಂದಾರಂಭಿಸಿ ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಒಟ್ಟು ರೂ.340 ಕೋಟಿ ನಗದು ಬಹುಮಾನದ ಯೋಜನೆಯೊಂದನ್ನು ಘೋಷಿಸಿದೆ.
ಈ ಯೋಜನೆಯನ್ನು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಪ್ರಕಟಿಸಿದ್ದಾರೆ. ಸರಕಾರವು ‘ಲಕ್ಕಿ ಗ್ರಾಹಕ್ ಯೋಜನಾ’ ಹಾಗೂ ‘ಡಿಜಿ ಧನ್ ವ್ಯಾಪಾರ್ ಯೋಜನಾ’ ಎಂದು ಕರೆದಿರುವ ಈ ಯೋಜನೆಗಳು ರೂ.50ರಿಂದ ರೂ.3 ಸಾವಿರದ ವರೆಗೆ ಡಿಜಿಟಲ್ ಮಾಧ್ಯಮದಲ್ಲಿ ಪಾವತಿಸುವವರಿಗೆ ಅನ್ವಯಿಸುತ್ತವೆ.
ಕೇವಲ ಶೇ.5ರಷ್ಟು ಭಾರತೀಯರಷ್ಟೇ ಡಿಜಿಟಲ್ ಪಾವತಿ ಮಾಡುತ್ತಿದ್ದಾರೆಂದು ಅಂದಾಜಿಸಲಾಗಿದೆ. ನ.8ರಂದು ನೋಟು ರದ್ದತಿಯ ಬಳಿಕ, ಕಾರ್ಡ್ ಸ್ವೈಪ್ ಯಂತ್ರಗಳನ್ನು ಬಳಸಿ ಪಾಯಿಂಟ್ ಆಫ್ ಸೇಲ್ ವಹಿವಾಟು ಶೇ.95ಕ್ಕೆ ನೆಗೆದಿದೆಯೆಂದು ಕಾಂತ್ ತಿಳಿಸಿದ್ದಾರೆ.
ಸರಕಾರ ನೀಡಿರುವ ರುಪೇ ಕಾರ್ಡ್, ಯುಪಿಐ, ಯುಎಸ್‌ಎಸ್‌ಡಿ ಹಾಗೂ ಆಧಾರ್ ಮೂಲಕ ಪಾವತಿ ವ್ಯವಸ್ಥೆಗಳಷ್ಟೇ ಬಹುಮಾನ ಯೋಜನೆಗೆ ಅರ್ಹವಾಗಿವೆ. ಖಾಸಗಿ ಕ್ರೆಡಿಟ್ ಕಾರ್ಡ್ ಹಾಗೂ ಖಾಸಗಿ ಕಂಪೆನಿಗಳ ಇ-ವ್ಯಾಲೆಟ್ ಬಳಸುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗದು ಬಿಕ್ಕಟ್ಟನ್ನು ಪರಿಹರಿಸಲು ಹೊಸ ನೋಟುಗಳನ್ನು ಅಗತ್ಯವಿರುವ ಕಡೆಗಳಿಗೆ ವಿಮಾನದ ಮೂಲಕ ಕಳುಹಿಸಲಾಗುತ್ತಿದ್ದು, ಸತತ ಪೂರೈಕೆಯನ್ನು ಖಚಿತಪಡಿಸಲಾಗುತ್ತಿದೆ. ನಗದು ಕೊರತೆಯಿರುವ ಗ್ರಾಮೀಣ ಪ್ರದೇಶಗಳನ್ನು ಗುರುತಿಸಲು ಈಗ ಆದ್ಯತೆ ನೀಡಲಾಗಿದೆ. ಪರಿಸ್ಥಿತಿಯು ಕ್ರಮೇಣ ಸುಧಾರಿಸುತ್ತ ಬಂದಿದೆಯೆಂದು ಕಾಂತ್ ತಿಳಿಸಿದ್ದಾರೆ.
ಕಡಿಮೆ ಅವಧಿಯಲ್ಲಿ ಹೆಚ್ಚು ನಗದು ಪೂರೈಸಲು ಆರಂಭದಲ್ಲಿ ರೂ.2000ದ ನೋಟುಗಳನ್ನು ವ್ಯಾಪಕವಾಗಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ರೂ.500ರ ನೋಟು ಮುದ್ರಣಕ್ಕೆ ಗಮನ ನೀಡಲಾಗಿದೆ. ರೂ.100 ರೂ., ರೂ.50, ರೂ.20 ಹಾಗೂ ರೂ.10ರ ನೋಟುಗಳನ್ನು ಕಳೆದ 5 ವಾರಗಳಲ್ಲಿ ವಾರ್ಷಿಕ ಸಾಮಾನ್ಯ ಪೂರೈಕೆಯ ಮೂರು ಪಟ್ಟುಗಳಷ್ಟು ಬಿಡುಗಡೆಗೊಳಿಸಲಾಗಿದೆಯೆಂದು ಕಾಂತ ಹೇಳಿದ್ದಾರೆ.
ಆರ್‌ಬಿಐ ನ.8ರ ಬಳಿಕ 5 ಲಕ್ಷ ಕೋಟಿಗೂ ಹೆಚ್ಚು ರೂ.ಗಳನ್ನು ಹೊಸ ನೋಟುಗಳ ರೂಪದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದಿದೆಯೆಂದು ಅವರು ತಿಳಿಸಿದ್ದಾರೆ.







