ತೈವಾನ್ ವಿರುದ್ಧ ಬಲಪ್ರಯೋಗ ನಡೆಸಲು ಯೋಚಿಸುತ್ತಿರುವ ಚೀನಾ
ಡೊನಾಲ್ಡ್ ಟ್ರಂಪ್ ಪರಿಣಾಮ!

ಬೀಜಿಂಗ್, ಡಿ. 15: ಅಮೆರಿಕದಲ್ಲಿ ತನ್ನ ಹಿತಾಸಕ್ತಿಗೆ ಪ್ರತಿಕೂಲವಾಗಿರುವ ಡೊನಾಲ್ಡ್ ಟ್ರಂಪ್ ಸರಕಾರ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, ದ್ವೀಪ ರಾಷ್ಟ್ರ ತೈವಾನನ್ನು ವಿಲೀನಗೊಳಿಸುವುದಕ್ಕಾಗಿ ‘ಬಲ ಪ್ರಯೋಗಿಸುವ’ ಬಗ್ಗೆ ಚೀನಾ ಈಗ ಸಾರ್ವಜನಿಕವಾಗಿ ಮಾತನಾಡುತ್ತಿದೆ.
‘‘ತೈವಾನ್ ಕುರಿತ ತನ್ನ ನೀತಿಯನ್ನು ಮಾರ್ಪಡಿಸಿ, ಬಲಪ್ರಯೋಗವನ್ನು ಪ್ರಮುಖ ಆಯ್ಕೆಯನ್ನಾಗಿಸುವುದನ್ನು ಪರಿಶೀಲಿಸುವುದು ಹಾಗೂ ಅದಕ್ಕಾಗಿ ಎಚ್ಚರಿಕೆಯ ಸಿದ್ಧತೆಗಳನ್ನು ನಡೆಸುವುದಕ್ಕೆ ಈಗ ಸಮಯ ಸನ್ನಿಹಿತವಾಗಿರುವಂತೆ ಕಂಡುಬರುತ್ತಿದೆ’’ ಎಂದು ಚೀನಾದ ಸರಕಾರಿ ಪರ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ತನ್ನ ಇಂದಿನ ಸಂಪಾದಕೀಯದಲ್ಲಿ ಹೇಳಿದೆ.
ಪತ್ರಿಕೆಯ ಈ ಎಚ್ಚರಿಕೆಯನ್ನು ತಳ್ಳಿಹಾಕಲಾಗದು, ಯಾಕೆಂದರೆ, ವಿದೇಶ ನೀತಿಗೆ ಸಂಬಂಧಿಸಿ ತನಗೆ ಹೇಳಬೇಕಾಗಿರುವುದನ್ನು ಹೇಳಲು ಚೀನಾವು ಈ ಪತ್ರಿಕೆಯನ್ನು ಬಳಸಿಕೊಳ್ಳುತ್ತದೆ ಎಂಬುದಾಗಿ ವೀಕ್ಷಕರು ಹೇಳುತ್ತಾರೆ.
ದಶಕಗಳ ಅವಧಿಯ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಮೀರಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತೈವಾನ್ ಅಧ್ಯಕ್ಷೆಯ ಫೋನ್ ಕರೆಯನ್ನು ಸ್ವೀಕರಿಸಿ ಮಾತನಾಡಿದ್ದರು. ಹಾಗೂ ಬಳಿಕ, ‘ಒಂದೇ ಚೀನಾ’ ನೀತಿಯ ವಿರುದ್ಧವಾಗಿಯೂ ಅವರು ಮಾತನಾಡಿದ್ದರು. ಆಗಲೇ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ನಿಕಟವಾಗಿದೆ ಎಂದು ಹೇಳಲಾಗಿರುವ ‘ಗ್ಲೋಬಲ್ ಟೈಮ್ಸ್’ ಆ ಹೇಳಿಕೆಗಳನೆನು ಸಾರಾಸಗಟಾಗಿ ಪ್ರತಿಭಟಿಸಿತ್ತು.
ತೈವಾನ್ ತನ್ನಿಂದ ಸಿಡಿದು ಹೋದ ಪ್ರಾಂತ ಎಂಬುದಾಗಿ ಚೀನಾ ಭಾವಿಸುತ್ತಿದೆ ಹಾಗೂ ಆ ವಿಷಯದಲ್ಲಿ ತುಂಬಾ ಸೂಕ್ಷ್ಮವಾಗಿ ವ್ಯವಹರಿಸುತ್ತಿದೆ.







