ನೋಟು ರದ್ದತಿಯಿಂದ ಸಂಕಷ್ಟ : ಸಂಯಮ ಕಳಕೊಂಡು ಪಕ್ಷದ ಹಿರಿಯ ನಾಯಕರ ಮೇಲೇ ರೇಗಿದ ಅಮಿತ್ ಶಾ

ಹೊಸದಿಲ್ಲಿ, ಡಿ.15: ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವ ನಿರ್ಧಾರದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆಯಾಗಿದೆ . ಜನರು ಪಕ್ಷದ ಮೇಲೆ ಕಳೆದುಕೊಳ್ಳುತ್ತಿರುವ ವಿಶ್ವಾಸವನ್ನು ಮರು ಸ್ಥಾಪಿಸಬೇಕಿದ್ದರೆ ನೋಟು ಅಮಾನ್ಯ ನಿರ್ಧಾರವನ್ನು ಮರುಪರಿಶೀಲಿಸಬೇಕು..
ಹೀಗೆಂದು ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಸದಸ್ಯರೋರ್ವರು ನುಡಿದಾಗ ಪಕ್ಷದ ಅಧ್ಯಕ್ಷ ಅಮಿತ್ ಶಾ ಕೆಂಡಾಮಂಡಲರಾಗಿ ಕೂಗಾಡಿದ ಘಟನೆ ನಡೆಯಿತು. ಮಂಗಳವಾರ ಪಕ್ಷದ ಅಧ್ಯಕ್ಷ ಅಮಿತ್‌ಶಾ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯಿತು. ನೋಟು ಅಮಾನ್ಯಗೊಳಿಸಿದ ಕ್ರಮದಿಂದ ಜನರಿಗಾಗುವ ಅನುಕೂಲದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕಾರ್ಯನೀತಿಯ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದ ಜನರಿಗೆ ಮನದಟ್ಟು ಮಾಡಿಕೊಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವಿತ್ತು.
ಆದರೆ ಸಭೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಮುಖಂಡರು ನಿರ್ಧಾರದ ಯಶಸ್ಸಿನ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿಯೋರ್ವರು ತಿಳಿಸಿದ್ದಾರೆ. ಮೋದಿಯವರು ಇಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ತಜ್ಞರ ಸಲಹೆಗಳನ್ನು ಪಡೆದಿದ್ದರೆ ಪಕ್ಷಕ್ಕೆ ಈ ಬಿಕ್ಕಟ್ಟಿನ ಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದಾಗ ಅಮಿತ್ ಶಾ ಅವರ ಸಹನೆಯ ಕಟ್ಟೆಯೊಡೆಯಿತು ಎಂದವರು ತಿಳಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಕೂಗಾಡಿದ ಶಾ, ಮೋದಿಯವರ ಚಾರಿತ್ರಿಕ ನಿರ್ಧಾರವನ್ನು ಯಶಸ್ಸುಗೊಳಿಸಲು ಸಾಧ್ಯವಾಗುವುದನ್ನೆಲ್ಲಾ ಮಾಡಿ ಎಂದು ಆದೇಶಿಸಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಉಪಾಧ್ಯಕ್ಷರೋರ್ವರು ತಿಳಿಸಿದ್ದಾರೆ.
ಅಡ್ವಾಣಿಯ ಅಳಲು: ಇದಕ್ಕೂ ಮೊದಲು ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಸಂಸತ್‌ನಲ್ಲಿ ನೋಟು ಅಮಾನ್ಯದ ಬಗ್ಗೆ ಚರ್ಚೆಗೆ ಅನುಕೂಲ ಮಾಡಿಕೊಡದ ಬಗ್ಗೆ ಆಡಳಿತ ಪಕ್ಷದ ಸದಸ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಲೋಕಸಭೆಯಲ್ಲಿ ನಡೆಯಿತು. ಸಂಸದ್ ಕಲಾಪಕ್ಕೆ ಭಂಗ ಉಂಟಾಗಿರುವುದರಿಂದ ತೀವ್ರ ಸಂಕಟಕ್ಕೆ ಒಳಗಾದವರಂತೆ ಕಂಡು ಬಂದ ಅಡ್ವಾಣಿ, ಲೋಕಸಭೆಗೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ್ದರು.







