‘ಅಂಗನವಾಡಿ ಕಟ್ಟಡಕ್ಕೆ ನಿವೇಶನ ಒದಗಿಸಲು ಪ್ರಯತ್ನ’
ಕಾರವಾರ, ಡಿ.15: ಜಿಲ್ಲೆಗೆ ಹೊಸದಾಗಿ 149ಅಂಗನವಾಡಿಗಳನ್ನು ಮಂಜೂರು ಮಾಡಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎಲ್ಲ್ಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಒಟ್ಟು 2,687 ಅಂಗನವಾಡಿಗಳಿದ್ದು, 1,822 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ.
217ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಹೊಸದಾಗಿ 26ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದು, ಇನ್ನೂ 622 ಅಂಗನವಾಡಿಗಳಿಗೆ ಕಟ್ಟಡವನ್ನು ನಿರ್ಮಿಸಬೇಕಾಗಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದು, ಕೆಲವು ಕಡೆಗಳಲ್ಲಿ ನಿವೇಶನದ ಲಭ್ಯತೆ ಇರದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ.
ಶಾಲಾ ಆವರಣದಲ್ಲಿ ಸ್ಥಳ ಲಭ್ಯವಿದ್ದರೆ ಅಲ್ಲಿಯೇ ಅಂಗನವಾಡಿ ನಿರ್ಮಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಿವೇಶನ ಲಭ್ಯವಿಲ್ಲದಿದ್ದರೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ನಿವೇಶನ ಗುರುತಿಸುವ ಕಾರ್ಯ ನಡೆಸಬೇಕು ಎಂದರು. ಎಲ್ಲಾ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಯಲ್ಲಾಪುರ ಹಾಗೂ ಹಳಿಯಾಳ ತಾಲೂಕುಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಬಿಸಿಯೂಟ ತಪಾಸಣೆ: ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಶುಚಿತ್ವ ಹಾಗೂ ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸಬೇಕು. ಪ್ರತೀ ದಿನ ಆಯಾ ಶಾಲೆಯ ಇಬ್ಬರು ಶಿಕ್ಷಕರು ಬಿಸಿಯೂಟದ ರುಚಿ ನೋಡಿ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಅಡುಗೆ ಕೋಣೆಗೆ ಈ ಇಬ್ಬರು ಶಿಕ್ಷಕರು, ಮುಖ್ಯೋಪಾಧ್ಯಾಯರನ್ನು ಬಿಟ್ಟರೆ ಬೇರೆಯವರು ಪ್ರವೇಶಿಸಲು ಅವಕಾಶ ನೀಡಬಾರದು. ಬಿಸಿಯೂಟದ ಕುರಿತು ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮ ಸಡಕ್ ಯೋಜನೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು 18ಕಾಮ ಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 12ಕಾಮಗಾರಿಗಳು ಪೂರ್ಣಗೊಂಡಿವೆ. 6ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 1,286ಲಕ್ಷ ರೂ. ಬಿಡುಗಡೆ ಯಾಗಿದ್ದು, 1,142ಲಕ್ಷ ರೂ. ವೆಚ್ಚವಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಎರಡನೆ ಹಂತದಲ್ಲಿ 439ಲಕ್ಷ ರೂ. ಬಿಡುಗಡೆಯಾಗಿದ್ದು, 65ಕಾಮಗಾರಿಗಳ ಪೈಕಿ 54ಕಾಮಗಾರಿಗಳು ಪೂರ್ಣ ಗೊಂಡಿವೆ.
ನಮ್ಮ ಗ್ರಾಮ ನಮ್ಮ ರಸ್ತೆ ಮೂರನೆಹಂತದಲ್ಲಿ 1,524ಲಕ್ಷ ರೂ. ಬಿಡುಗಡೆಯಾಗಿದ್ದು, 41ಕಾಮಗಾರಿಗಳ ಪೈಕಿ 24ಪೂರ್ಣಗೊಂಡಿವೆ. ಎರಡನೆ ಹಂತದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮಾರ್ಚ್ ಒಳಗೆ ಹಾಗೂ ಮೂರನೆ ಹಂತದ ಎಲ್ಲಾ ಕಾಮಗಾರಿಗಳನ್ನು ಮುಂದಿನ ಮೇ ಒಳಗಾಗಿ ಪೂರ್ಣ ಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ತಿಪ್ಪಣ್ಣ ಪಾಟೀಲ್, ಬಸವರಾಜ ದೊಡ್ಮನಿ, ಶಿವಾನಂದ ಹೆಗಡೆ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.







