ಆಗುಂಬೆ ಸಮೀಪ ರೆಸಾರ್ಟ್ ನಿರ್ಮಾಣಕ್ಕೆ ವಿರೋಧ: ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ಮನವಿ
ಶಿವಮೊಗ್ಗ, ಡಿ. 15: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ತಲ್ಲೂರು ಗ್ರಾಮದ ಸರ್ವೇ ನಂ. 262 ರಲ್ಲಿ ಕಾನೂನುಬಾಹಿರವಾಗಿ ತಲೆ ಎತ್ತುತ್ತಿರುವ ರೆಸಾರ್ಟ್ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಬೇಕೆಂದು ಆಗ್ರಹಿಸಿ, ಗುರುವಾರ ಸ್ಥಳೀಯ ಗ್ರಾಮಸ್ಥರು ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ವ್ಯಕ್ತಿಯೊಬ್ಬರು ಭಾರೀ ದೊಡ್ಡ ಪ್ರಮಾಣದಲ್ಲಿ, ಲಕ್ಷಾಂತರ ರೂ. ವೆಚ್ಚದಲ್ಲಿ ರೆಸಾರ್ಟ್ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ. ಪ್ರತ್ಯೇಕ ಈಜುಕೊಳ ಸೇರಿದಂತೆ ನಾನಾ ಸೌಲಭ್ಯಗಳನ್ನು ಕಟ್ಟಡದಲ್ಲಿ ಕಲ್ಪಿಸಲಾಗುತ್ತಿದೆ. ಆದರೆ ಸಂಬಂಧಿಸಿದವರು ಸ್ಥಳೀಯಾಡಳಿತದಿಂದ ಫಾರಂ ಹೌಸ್ ನಿರ್ಮಾಣಕ್ಕೆಂದು ಅನುಮತಿ ಪಡೆದಿದ್ದು, ಇದೀಗ ರೆಸಾರ್ಟ್ ಕಟ್ಟಡ ನಿರ್ಮಿಸುತ್ತಿದ್ದಾರೆ.
ಇದು ಕಾನೂನು ಬಾಹಿರವಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ರೆಸಾರ್ಟ್ ಕಟ್ಟಡ ನಿರ್ಮಾಣಕ್ಕಾಗಿ ಸಮೀಪದಲ್ಲಿಯೇ ಹಾದು ಹೋಗಿರುವ ಮಲಾಪಹಾರಿ ನದಿಯ ಹರಿವು ತಡೆ ಹಿಡಿಯಲಾಗಿದೆ.
ನದಿ ಮಧ್ಯದಲ್ಲಿ ಜೆಸಿಬಿಗಳಿಂದ ಮಣ್ಣು ಹಾಕಿಸಿ ಚಿಕ್ಕ ಅಣೆಕಟ್ಟು ನಿರ್ಮಿಸಲಾಗಿದೆ. ಪಂಪ್‌ಸೆಟ್ ಮೂಲಕ ನೀರನ್ನು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮಲಾಪಹಾರಿ ನದಿಯ ನೀರನ್ನು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಬಳಕೆ ಮಾಡುತ್ತಾರೆ. ಇದೀಗ ರೆಸಾರ್ಟ್ ನಿರ್ಮಾಣಕ್ಕಾಗಿ ನೀರಿನ ಹರಿವನ್ನು ತಡೆಹಿಡಿದಿರುವುದರಿಂದ ನಾಗರಿಕರು ತೊಂದರೆಗೊಳಪಡುವಂತಾಗಿದೆ.
ಆದರೆ ಸಂಬಂಧಿಸಿದ ಇಲಾಖೆಯವರು ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗುಂಬೆ ಸರಕಾರಿ ಶಾಲೆಯಿಂದ ರೆಸಾರ್ಟ್ ಜಾಗವು ಸುಮಾರು 20 ಮೀಟರ್ ದೂರದಲ್ಲಿದೆ. ಹಾಗೆಯೇ ರೆಸಾರ್ಟ್ ಕಟ್ಟಡದ ತ್ಯಾಜ್ಯವು ಊರಿನ ಜನ ಬಳಸುವ ಕುಡಿಯುವ ನೀರಿಗೆ ಸೇರ್ಪಡೆಯಾಗುತ್ತಿದೆ. ಹಾಗೆಯೇ 4 ಎಕರೆ ಜಮೀನು ಖರೀದಿಸಿ 10 ಎಕರೆ ಅತಿಕ್ರಮಣ ಮಾಡಲಾಗಿದೆ.
ಈ ಬಗ್ಗೆ ಸರ್ವೇ ನಡೆಸಿ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಕ್ಷಣವೇ ಜಿಲ್ಲಾಡಳಿತವು ರೆಸಾರ್ಟ್ ಕಟ್ಟಡ ಕಾಮಗಾರಿಗೆ ತಡೆ ನೀಡಬೇಕು. ಕೃಷಿ ಉದ್ದೇಶಕ್ಕಾಗಿ ಖರೀದಿಸಿದ ಜಮೀನನ್ನು ಅದೇ ಉದ್ದೇಶಕ್ಕೆ ಬಳಸುವಂತೆ ಆದೇಶಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.







