ಕಂಗನಾ ಸಂಭಾವನೆ 15 ಕೋಟಿ

ಸಂಭಾವನೆಯ ವಿಷಯದಲ್ಲಿ ಬಾಲಿವುಡ್‌ನಲ್ಲಿ ನಟರಿಗಿಂತ ನಟಿಯರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತಿದೆಯೆಂಬ ದೂರು ಈಗಲೂ ಕೇಳಿಬರುತ್ತಿದೆ. ಇಷ್ಟಕ್ಕೂ ನಟಿಯರ ಪೈಕಿ ಗರಿಷ್ಠ ಸಂಭಾವನೆ ಡಿಮ್ಯಾಂಡ್ ಮಾಡುವ ನಟಿ ಯಾರೆಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ತನು ವೆಡ್ಸ್ ಮನು ಹಾಗೂ ಕ್ವೀನ್ ಚಿತ್ರ ಖ್ಯಾತಿಯ ಕಂಗನಾ ರಾಣಾವತ್ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರ ಪಟ್ಟಿನಲ್ಲಿ ನಂ.1 ಸ್ಥಾನದಲ್ಲಿದ್ದಾಳೆ.
ಸಂಜಯ್‌ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರದಲ್ಲಿ 13 ಕೋಟಿ ಸಂಭಾವನೆ ಪಡೆದಿರುವ ದೀಪಿಕಾ, ಈತನಕ ಗರಿಷ್ಠ ಸಂಭಾವನೆ ಪಡೆದಿರುವ ಬಾಲಿವುಡ್ ಹಿರೋಯಿನ್ ಎನಿಸಿಕೊಂಡಿದ್ದಳು. ಆದಾಗ್ಯೂ ಈಗ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ಕಂಗನಾ ಈಗ ತನ್ನ ಸಂಭಾವನೆಯನ್ನು ಬರೋಬ್ಬರಿ 15 ಕೋಟಿ ರೂ.ಗೇರಿಸಿದ್ದಾಳೆ. ತಮ್ಮ ಚಿತ್ರದಲ್ಲಿ ನಟಿಸಲು ಕಾಲ್‌ಶೀಟ್ ಕೇಳಿದ ಇಬ್ಬರು ನಿರ್ಮಾಪಕರ ಮುಂದೆ ಕಂಗನಾ 15 ಕೋಟಿ ರೂ. ಸಂಭಾವನೆಯ ಬೇಡಿಕೆಯನ್ನಿಟ್ಟಿದ್ದಾಳಂತೆ. ಆದರೆ ಆ ನಿರ್ಮಾಪಕರು, ಕ್ವೀನ್‌ಳ ಬೇಡಿಕೆಯನ್ನು ಒಪ್ಪಿಕೊಂಡರೋ ಬಿಟ್ಟರೋ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಆದರೆ ಕಂಗನಾ ಈ ವರದಿಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾಳೆ. ‘ನಾನು ಎಷ್ಟು ಸಂಭಾವನೆಯನ್ನು ಪಡೆಯುವೆನೆಂಬ ಬಗ್ಗೆ ಇತರರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅದು ನನಗಷ್ಟೇ ತಿಳಿದಿದ್ದರೆ ಸಾಕು’ ಎಂದಾಕೆ ಖಾರವಾಗಿಯೇ ಹೇಳಿದ್ದಾಳೆ.
ಇಷ್ಟಕ್ಕೂ ಕಂಗನಾ ಅಭಿನಯದ ಒಂದೇ ಒಂದು ಚಿತ್ರ ಈ ವರ್ಷ ತೆರೆಕಂಡಿಲ್ಲ. ಆದರೂ ಕಂಗನಾ ತನ್ನ ಸಂಭಾವನೆಯನ್ನು 15 ಕೋಟಿ ರೂ.ಗೆ ಏರಿಸಿರುವುದು ಬಾಲಿವುಡ್ ಮಂದಿಯ ಹುಬ್ಬೇರಿಸಿದೆ. ಆದರೆ 2017ರಲ್ಲಿ ಆಕೆಯ ಅಭಿನಯದ ಕನಿಷ್ಠ 3 ಚಿತ್ರಗಳು ಬಿಡುಗಡೆಗಾಗಿ ಕ್ಯೂ ನಿಲ್ಲಲಿವೆ.
ವಿಶಾಲ್ ಭಾರದ್ವಾಜ್ ನಿರ್ದೇಶನದ ರಂಗೂನ್‌ನಲ್ಲಿ ಕಂಗನಾ ಖ್ಯಾತ ನಟರಾದ ಶಹೀದ್ ಹಾಗೂ ಸೈಫ್ ಅಲಿ ಖಾನ್ ಜೊತೆ ನಟಿಸಿದ್ದಾರೆ. ಹಾಗೆಯೇ ಹಂಸ್‌ಲಾಲ್ ಮೆಹ್ತಾರ ‘ಸಿಮ್ರಾನ್’ ಮತ್ತು ಕೇತನ್ ಮೆಹ್ತಾರ ‘ರಾಣಿ ಲಕ್ಷ್ಮೀ ಬಾಯಿ’ನಲ್ಲಿಯೂ ಆಕೆ ಅಭಿನಯಿಸುತ್ತಿದ್ದಾರೆ.







