ಸಾವಿತ್ರಿಯಾಗಿ ಸಮಂತಾ

ಜೀವಂತ ದಂತಕತೆಯೆನಿಸಿದ್ದ ತೆಲುಗು ಚಿತ್ರರಂಗದ ಮಹೋನ್ನತ ನಟಿ ಸಾವಿತ್ರಿಯ ಬದುಕು ಈಗ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ. ಅತ್ತಾರೆಂಟಿಕಿ ದಾರೆದಿ,ದೂಕುಡು ಮತ್ತಿತರ ಸರಣಿ ಹಿಟ್ ಚಿತ್ರಗಳ ಮೂಲಕ ತೆಲುಗಿನಲ್ಲಿ ಚಿನ್ನದ ಹುಡುಗಿ ಎಂದೇ ಜನಪ್ರಿಯಳಾಗಿರುವ ಸಮಂತಾ, ಸಾವಿತ್ರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ‘ಯೆವಡೆ ಸುಬ್ರಹ್ಮಣ್ಯಂ’ ಖ್ಯಾತಿಯ ನಾಗ್ ಅಶ್ವಿನ್, ಸಾವಿತ್ರಿಯನ್ನು ನಿರ್ದೇಶಿಸಲಿದ್ದಾರೆ.
ಗತಕಾಲದ ಮೇರು ನಟರಾದ ಎನ್‌ಟಿಆರ್ ಹಾಗೂ ಅಕ್ಕಿನೇನಿ ನಾಗೇಶ್ವರ್ ರಾವ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಸಾವಿತ್ರಿ ಅತ್ಯಂತ ಯಶಸ್ವಿ ನಟಿಯೆನಿಸಿದ್ದರು. ಸಾವಿತ್ರಿಯ ಬಯೋಪಿಕ್ ಚಿತ್ರದಲ್ಲಿ ಎನ್‌ಟಿಆರ್ ಹಾಗೂ ಅಕ್ಕಿನೇನಿ ಅವರ ಪಾತ್ರಗಳನ್ನು ಕ್ರಮವಾಗಿ ಜೂನಿಯರ್ ಎನ್‌ಟಿಆರ್ ಹಾಗೂ ನಾಗಚೈತನ್ಯ ನಿರ್ವಹಿಸಲಿದ್ದಾರೆ.
ಈ ವರ್ಷ ಸಮಂತಾ ಅಭಿನಯದ ಮೂರೇ ಚಿತ್ರಗಳು ಬಿಡುಗಡೆಯಾಗಿವೆ. ಸೂಪರ್ ಹಿಟ್ ಚಿತ್ರ ಜನತಾ ಗ್ಯಾರೇಜ್ ಬಳಿಕ ಸಮಂತಾ ಯಾವುದೇ ಹೊಸ ಚಿತ್ರಕ್ಕೆ ಕಾಲ್ ಶೀಟ್ ನೀಡಿಲ್ಲ. ಟಾಲಿವುಡ್‌ನಲ್ಲಿ ತನಗೆ ಅಭಿನಯ ಪ್ರತಿಭೆಗೆ ಅವಕಾಶ ನೀಡುವಂತಹ ಚಿತ್ರಗಳು ದೊರೆಯುತ್ತಿಲ್ಲವೆಂದು ಸಮಂತಾ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದರು. ಇದೀಗ ಸಾವಿತ್ರಿ ಚಿತ್ರದ ಮೂಲಕ ಸಮಂತಾಗೆ ತನ್ನ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಲು ಸದವಕಾಶವೊಂದು ದೊರೆತಿದೆ.
ತೆಳ್ಳಗೆ ಇರುವ ಸಮಂತಾ, ಸಾವಿತ್ರಿಯಾಗಿ ನಟಿಸಲು ತನ್ನ ದೇಹತೂಕವನ್ನು ತುಸುಹೆಚ್ಚಿಕೊಳ್ಳಬೇಕಿದ್ದು, ಇದಕ್ಕಾಗಿ ಆಕೆ ತಯಾರಾಗುತ್ತಿದ್ದಾರಂತೆ. ಈ ಮೊದಲು ಸಾವಿತ್ರಿ ಪಾತ್ರಕ್ಕೆ ನಿತ್ಯಾಮೆನನ್ ಹೆಸರು ಕೇಳಿ ಬಂದಿತ್ತಾದರೂ, ಅಂತಿಮವಾಗಿ ಅದು ಸಮಂತಾ ಪಾಲಾಗಿದೆ. ಬೆಸ್ಟ್ ಆಫ್ ಲಕ್ ಸಮಂತಾ...







