ಅನುರಾಗ್ ಠಾಕೂರ್‌ಗೆ ಜೈಲು ಭೀತಿ?
ಸುಪ್ರೀಂಕೋರ್ಟ್‌ಗೆ ಸುಳ್ಳು ಸಾಕ್ಷ ನೀಡಿದ ಬಿಸಿಸಿಐ ಬಾಸ್:

ಹೊಸದಿಲ್ಲಿ, ಡಿ.16: ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಸುಳ್ಳು ಸಾಕ್ಷ ನೀಡಿರುವುದು ಸುಪ್ರೀಂಕೋರ್ಟ್‌ನ ಗಮನಕ್ಕೆ ಬಂದಿದೆ. ಸುಳ್ಳು ಸಾಕ್ಷ ನೀಡಿದ್ದು ಸಾಬೀತಾದರೆ ಠಾಕೂರ್ ಜೈಲು ಪಾಲಾಗುವ ಭೀತಿಯನ್ನು ಎದುರಿಸುವಂತಾಗಿದೆ.
ಲೋಧಾ ಸಮಿತಿ ಶಿಫಾರಸು ಅನುಷ್ಠಾನದ ಬಗ್ಗೆ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಜೊತೆ ಚರ್ಚಿಸುವಂತೆ ಸುಪ್ರೀಂಕೋರ್ಟ್ ಅನುರಾಗ್ ಠಾಕೂರ್‌ಗೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿರುವುದಾಗಿ ಠಾಕೂರ್ ಪ್ರಮಾಣಪತ್ರ ಸಲ್ಲಿಸಿದ್ದರು.
ಒಂದು ವೇಳೆ ಅವರು ಆದೇಶವನ್ನು ಪಾಲಿಸದೇ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದು ಸಾಬೀತಾದರೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಲೋಧಾ ಸಮಿತಿಯ ಪ್ರಮುಖ ಶಿಫಾರಸುಗಳಾದ ಹಿರಿಯ ಅಧಿಕಾರಿಗಳ ವಜಾ ಸೇರಿದಂತೆ ಇನ್ನಿತರ ಮಹತ್ವದ ಅಂಶಗಳನ್ನು ಶಶಾಂಕ್ ಮನೋಹರ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಈ ಹಿಂದೆ ಆದೇಶಿಸಿತ್ತು.
ಅನುರಾಗ್ ಠಾಕೂರ್ ಅವರು ಶಶಾಂಕ್‌ರೊಂದಿಗೆ ಚರ್ಚಿಸದೆ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಇದು ನಿಜವಾದರೆ ಅನುರಾಗ್ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇನ್ನು ಠಾಕೂರ್ ಅವರು ಜೈಲು ಶಿಕ್ಷೆಗೆ ಗುರಿಯಾದರೆ ಅದರಿಂದ ಪಾರಾಗಲು ಕ್ಷಮೆ ಕೋರುವಂತೆ ಸುಪ್ರೀಂ ಸೂಚಿಸಿದೆ.
ಬಿಸಿಸಿಐನ ಪದಾಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಲೋಧಾ ಸಮಿತಿ ಸಲ್ಲಿಸಿರುವ ಮೂರನೆ ವರದಿಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ, ಠಾಕೂರ್ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಸುಳ್ಳು ಸಾಕ್ಷವಿದೆಯೇ ಎಂದು ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಹ್ಮಣ್ಯಂರಲ್ಲಿ ಕೇಳಿತು.
ಸುಪ್ರೀಂಕೋರ್ಟ್‌ಗೆ ನೀಡಿರುವ ಪ್ರಮಾಣಪತ್ರದಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸುಳ್ಳು ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷನಾಗಿ ನಾನು ಶಶಾಂಕ್ ಮನೋಹರ್ ಅವರಿಂದ ಅಭಿಪ್ರಾಯ ಕೇಳಿದ್ದೇನೆ ಎಂದು ಠಾಕೂರ್ ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಅಮಿಕಸ್ ಕ್ಯೂರಿ ಸುಪ್ರೀಂಕೋರ್ಟಿಗೆ ತಿಳಿಸಿದರು. ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜ.3ಕ್ಕೆ ಮುಂದೂಡಿದೆ.
ಆಡಳಿತಾಧಿಕಾರಿ ಹುದ್ದೆಗೆ ಹೆಸರು ಸೂಚಿಸಲು ಸುಪ್ರೀಂ ಆದೇಶ:
ಆಡಳಿತಾಧಿಕಾರಿ ಹುದ್ದೆಗೆ ಅಭ್ಯರ್ಥಿಯ ಹೆಸರನ್ನು ಸೂಚಿಸಬೇಕೆಂದು ಸುಪ್ರೀಂಕೋರ್ಟ್ ಬಿಸಿಸಿಐಗೆ ಆದೇಶಿಸಿದೆ. ಇದಕ್ಕೆ ಒಂದು ವಾರ ಕಾಲಾವಕಾಶ ನೀಡಿದೆ. ಬಿಸಿಸಿಐ ಲೋಧಾ ಸಮಿತಿ ವಿಚಾರ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಾಗ ಅಮಿಕಸ್ ಕ್ಯೂರಿ ಅವರ ಹೇಳಿಕೆಯನ್ನು ಆಧರಿಸಿ ಸುಪ್ರೀಂಕೋರ್ಟ್ ಈ ನಿರ್ದೇಶನ ನೀಡಿತು.
ಡಿಸೆಂಬರ್‌ನಲ್ಲಿ ವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ)ಕರೆದಿದ್ದ ಬಿಸಿಸಿಐ, ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕೆಂದು ಲೋಧಾ ಸಮಿತಿಯ ಶಿಫಾರಸಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಸಿತ್ತು.
ಸಭೆಯ ಬಳಿಕ ಲೋಧಾ ಸಮಿತಿಯ ಕೆಲವೊಂದು ಶಿಫಾರಸಿನ ಬಗ್ಗೆ ಕಠಿಣ ನಿಲುವನ್ನು ಕಾಯ್ದುಕೊಳ್ಳಲು ನಿರ್ಧರಿಸಿತು. ಲೋಧಾ ಸಮಿತಿಯು ಕೇಂದ್ರ ಮಾಜಿ ಗೃಹ ಕಾರ್ಯದರ್ಶಿ ಪಿ.ಕೆ. ಪಿಳ್ಳೈ ಅವರನ್ನು ಸ್ವತಂತ್ರ ಆಡಿಟರ್ ಜನರಲ್ ನೇಮಕ ಮಾಡಬೇಕೆಂದು ಮನವಿ ಮಾಡಿತ್ತು. ಇದಕ್ಕೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.
ಲೋಧಾ ಸಮಿತಿ ಸೆಪ್ಟಂಬರ್ 28 ರಂದು ಸಲ್ಲಿಸಿದ್ದ ತನ್ನ ಮೊದಲ ವರದಿಯಲ್ಲಿ ಬಿಸಿಸಿಐನ ಹಾಲಿ ಪದಾಧಿಕಾರಿಗಳನ್ನು ಕಿತ್ತು ಹಾಕಬೇಕು. ಸ್ವತಂತ್ರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ಶಿಫಾರಸು ಮಾಡಿತ್ತು.
ನ.14 ರಂದು ಸಲ್ಲಿಸಿರುವ 3ನೆ ವರದಿಯಲ್ಲಿ ಸಮಿತಿ ತನ್ನ ಬೇಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಬಿಸಿಸಿಐ ಪದಾಧಿಕಾರಿಗಳನ್ನು ಹಾಗೂ ರಾಜ್ಯ ಅಸೋಸಿಯೇಶನ್‌ಗಳನ್ನು ಅನರ್ಹ ಗೊಳಿಸಬೇಕು.
ನ.14 ರಂದು ಸಲ್ಲಿಸಿರುವ 3ನೆ ವರದಿಯಲ್ಲಿ ಸಮಿತಿ ತನ್ನ ಬೇಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಬಿಸಿಸಿಐ ಪದಾಧಿಕಾರಿಗಳನ್ನು ಹಾಗೂ ರಾಜ್ಯ ಅಸೋಸಿಯೇಶನ್‌ಗಳನ್ನು ಅನರ್ಹ ಗೊಳಿಸಬೇಕು.
ಜುಲೈ 18ರ ಸುಪ್ರೀಂ ಆದೇಶದಂತೆ ಇವರೆಲ್ಲರೂ ಅನರ್ಹರಾಗಿದ್ದಾರೆ. ಬಿಸಿಸಿಐ ವೀಕ್ಷಕರಾಗಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಪಿಳ್ಳೈ ಅವರನ್ನು ನೇಮಕ ಮಾಡಬೇಕು ಎಂದು ಹೇಳಿತ್ತು.







