ಜೂನಿಯರ್ ಹಾಕಿ ವಿಶ್ವಕಪ್: ಭಾರತ ಸೆಮಿಫೈನಲ್‌ಗೆ

ಲಕ್ನೋ, ಡಿ.15: ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಆತಿಥೇಯ ಭಾರತ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಗುರುವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಪ್ರಶಸ್ತಿ ಗೆಲ್ಲುವ ಪ್ರಬಲ ತಂಡವಾಗಿ ಹೊರಹೊಮ್ಮುತ್ತಿದೆ.
ಪ್ರೇಕ್ಷಕರಿಂದ ಕಿಕ್ಕಿರಿದ ಮೇಜರ್ ಧ್ಯಾನ್‌ಚಂದ್ ಸ್ಟೇಡಿಯಂನಲ್ಲಿ ಸ್ಪೇನ್ ತಂಡ 22ನೆ ನಿಮಿಷದಲ್ಲಿ ಮಾರ್ಕ್ ಸೆರ್ರಾಹಿಮ ಬಾರಿಸಿದ ಗೋಲು ನೆರವಿನಿಂದ 1-0 ಮುನ್ನಡೆ ಸಾಧಿಸಿತ್ತು. ಸಿಮ್ರಾನ್‌ಜೀತ್ ಸಿಂಗ್ 57ನೆ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.
ಭಾರತ ಸುಮಾರು 9 ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. 66ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ಹರ್ಮನ್‌ಪ್ರೀತ್ ಸಿಂಗ್ ಭಾರತ 2-1 ಅಂತರದಿಂದ ಗೆಲುವು ಸಾಧಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಲು ಕಾರಣರಾದರು.
ಈ ಗೆಲುವಿನ ಮೂಲಕ ಭಾರತ ತಂಡ ಸ್ಪೇನ್ ವಿರುದ್ದ ತನ್ನ ಪ್ರಾಬಲ್ಯ ಮುಂದುವರಿಸಿದೆ. 2005ರ ಆವೃತ್ತಿಯ ವಿಶ್ವಕಪ್‌ನಲ್ಲಿ ಕಂಚಿನ ಪದಕ ಸುತ್ತಿನಲ್ಲಿ ಸ್ಪೇನ್ ವಿರುದ್ಧ ಸೋತಿರುವುದಕ್ಕೆ ತಕ್ಕ ಸೇಡು ತೀರಿಸಿಕೊಂಡಿತು.
ಭಾರತ ಮೊದಲಾರ್ಧದಲ್ಲಿ ಎರಡು ಬಾರಿ ಪೆನಾಲ್ಟಿ ಅವಕಾಶವನ್ನು ಪಡೆದಿದ್ದರೂ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಯಿತು. ಸ್ಪೇನ್ 22ನೆ ನಿಮಿಷದಲ್ಲಿ ಪೆನಾಲ್ಟಿಕಾರ್ನರ್‌ನ ಮೂಲಕ ಮುನ್ನಡೆ ಸಾಧಿಸಿ ನೆರೆದಿದ್ದ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿತು.
ಭಾರತ ಕೊನೆಗೂ 57ನೆ ನಿಮಿಷದಲ್ಲಿ ಯಶಸ್ಸಿನ ಸವಿ ಉಂಡಿತು. ತನ್ನ 5ನೆ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿಕೊಂಡಿತು. ಹರ್ಮನ್‌ಪ್ರೀತ್ ಸಿಂಗ್ 65ನೆ ನಿಮಿಷದಲ್ಲಿ ಗೋಲು ಬಾರಿಸಿ ಭಾರತ 2-1 ರಿಂದ ಜಯ ಸಾಧಿಸಲು ನೆರವಾದರು.
ಭಾರತ ಕೊನೆಯ 10 ನಿಮಿಷದ ಆಟದಲ್ಲಿ ಇನ್ನೂ ನಾಲ್ಕು ಪೆನಾಲ್ಟಿ ಅವಕಾಶ ಪಡೆಯಿತು. ಭಾರತದ ಅರ್ಮಾನ್ ಹಳದಿ ಕಾರ್ಡ್ ಪಡೆದಾಗ ಭಾರತ ಕೊನೆಯ ಕೆಲವು ನಿಮಿಷ 10 ಆಟಗಾರರೊಂದಿಗೆ ಆಡಬೇಕಾಯಿತು.
ಇದಕ್ಕೆ ಮೊದಲು ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಬೆಲ್ಜಿಯಂ ತಂಡ ಅರ್ಜೆಂಟೀನವನ್ನು ಶೂಟೌಟ್‌ನಲ್ಲಿ ಮಣಿಸಿ ಸೆಮಿಫೈನಲ್‌ಗೆ ತಲುಪಿತು. ಸೆಮಿಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ







