ರಣಜಿ ಟ್ರೋಫಿ: ಜಾರ್ಖಂಡ್ ದಾಳಿಗೆ ಒಡಿಶಾ ತತ್ತರ
ನದೀಮ್, ಸನ್ನಿ ಗುಪ್ತಾ ಸ್ಪಿನ್ ಮೋಡಿ

ಥುಂಬ, ಡಿ.15: ಜಾರ್ಖಂಡ್ ತಂಡದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಒಡಿಶಾ ತಂಡ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದ ಮೊದಲ ದಿನವೇ 152 ರನ್‌ಗೆ ಆಲೌಟಾಗಿದೆ.
ಇಲ್ಲಿನ ಸೈಂಟ್ ಕ್ಸೇವಿಯರ್ ಕಾಲೇಜ್ ಮೈದಾನದ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಟಾಸ್ ಜಯಿಸಿದ ಜಾರ್ಖಂಡ್ ನಾಯಕ ಸೌರಭ್ ತಿವಾರಿ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಅಚ್ಚರಿ ಮೂಡಿಸಿದರು.
ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್(4-31) ಹಾಗೂ ಆಫ್ ಸ್ಪಿನ್ನರ್ ಸನ್ನಿ ಗುಪ್ತಾ(3-56) ಒಟ್ಟು 7 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಒಡಿಶಾವನ್ನು 84 ಓವರ್‌ಗಳಲ್ಲಿ 152 ರನ್‌ಗೆ ಆಲೌಟ್ ಮಾಡಿದರು. ಮೊದಲ ಇನಿಂಗ್ಸ್ ಆರಂಭಿಸಿರುವ ಜಾರ್ಖಂಡ್ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ. ಆನಂದ್ ಸಿಂಗ್(4) ಹಾಗೂ ಸುಮಿತ್ ಕುಮಾರ್(5) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಒಡಿಶಾ ಆರಂಭಿಕ ಆಟಗಾರರಾದ ಸಂದೀಪ್ ಪಟ್ನಾಯಕ್(43) ಹಾಗೂ ರಂಜಿತ್ ಸಿಂಗ್(20) ಜಾರ್ಖಂಡ್‌ನ ವೇಗಿ ಹಾಗೂ ಸ್ಪಿನ್ನರ್ ಬೌಲರ್‌ಗಳ ವಿರುದ್ಧ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಕೇವಲ 46 ರನ್ ಗಳಿಸಲು 27 ಓವರ್‌ಗಳನ್ನು ಆಡಿತು.
ನದೀಮ್ ಈ ಜೋಡಿಯನ್ನು 27.1 ಓವರ್‌ನಲ್ಲಿ ಬೇರ್ಪಡಿಸಿತು. ರಂಜಿತ್ ಸಿಂಗ್ ಔಟಾದ ಬೆನ್ನಿಗೆ ಮೂವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ನಾಯಕ ಗೋವಿಂದ ಪೊದ್ದಾರ್, ಅಭಿಷೇಕ್ ಯಾದವ್ ಹಾಗೂ ಸುಭ್ರಾಂಶು ಸೇನಾಪತಿ(0) ಔಟಾದಾಗ ಒಡಿಶಾ 48 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು.
ಪಟ್ನಾಯಕ್ ಅವರೊಂದಿಗೆ ಐದನೆ ವಿಕೆಟ್‌ಗೆ 36 ರನ್ ಸೇರಿಸಿದ ಬಿಪ್ಲಬ್ ಸಮಂಟ್ರೆ(19) ಎರಡು ಸಿಕ್ಸರ್ ಬಾರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ಸ್ಪಿನ್ನರ್ ಸನ್ನಿ ಗುಪ್ತಾ ಅವರು ಸಮಂಟ್ರೆ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಒಡಿಶಾದ ಪರ ಪಟ್ನಾಯಕ್(43 ರನ್, 174 ಎಸೆತ, 4 ಬೌಂಡರಿ) ಸರ್ವಾಧಿಕ ರನ್ ಬಾರಿಸಿದರು. ರಂಜಿತ್ ಸಿಂಗ್(20), ಸಮಂಟ್ರೆ(19), ಮೊಹಾಂತಿ(ಅಜೇಯ 17) ಹಾಗೂ ಪ್ರಧಾನ್(12) ಎರಡಂಕೆ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್
ಒಡಿಶಾ ಪ್ರಥಮ ಇನಿಂಗ್ಸ್: 84 ಓವರ್‌ಗಳಲ್ಲಿ 152 ರನ್‌ಗೆ ಆಲೌಟ್
(ಸಂದೀಪ್ ಪಟ್ನಾಯಕ್ 43, ರಂಜಿತ್ ಸಿಂಗ್ 20, ಸಮಂಟ್ರೆ 19, ಮೊಹಾಂತಿ ಅಜೇಯ 17, ಪ್ರಧಾನ್ 12, ನದೀಮ್ 4-31, ಸನ್ನಿ ಗುಪ್ತಾ 3-56)
ಜಾರ್ಖಂಡ್ ಪ್ರಥಮ ಇನಿಂಗ್ಸ್:
4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 9
(ಆನಂದ್ ಸಿಂಗ್ ಅಜೇಯ 4, ಸುಮಿತ್ ಕುಮಾರ್ ಅಜೇಯ 5)







