ಗೆಲುವಿನ ಹದಿನೆಂಟನೆ ಮೆಟ್ಟಿಲೇರಲು ಕೊಹ್ಲಿ ಪಡೆ ಚಿತ್ತ
*ಇಂದಿನಿಂದ ಐದನೇ ಕ್ರಿಕೆಟ್ ಟೆಸ್ಟ್ *ಇಂಗ್ಲೆಂಡ್‌ಗೆ ಪ್ರತಿಷ್ಠಿತೆಯನ್ನು ಉಳಿಸಲು ಕೊನೆಯ ಹೋರಾಟ

ಚೆನ್ನೈ,ಡಿ. 15: ಇಲ್ಲಿನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಭಾರತ ಈ ಪಂದ್ಯದಲ್ಲಿ ಗೆಲ್ಲುವುದರೊಂದಿಗೆ 4-0 ಅಂತರದಲ್ಲಿ ಸರಣಿ ಜಯಿಸುವ ಗುರಿ ಹೊಂದಿದೆ.
ಭಾರತ ಸರಣಿಯನ್ನು ಈಗಾಗಲೇ 3-0 ಅಂತರದಲ್ಲಿ ಗೆದ್ದುಕೊಂಡಿದೆ. ಈ ಕಾರಣದಿಂದಾಗಿ ಈ ಪಂದ್ಯ ಡ್ರಾಗೊಂಡರೂ, ಭಾರತಕ್ಕೆ ಕಳೆದುಕೊಳ್ಳಲು ಏನು ಇಲ್ಲ.ಆದರೆ ಭಾರತಕ್ಕೆ ಅಜೇಯ ಹದಿನೆಂಟನೆ ಗೆಲುವು ದಾಖಲಿಸಲು ಇದು ಉತ್ತಮ ಅವಕಾಶ.
ಚೆನ್ನೈ ಮಹಾನಗರ ಮುಖ್ಯ ಮಂತ್ರಿ ಜಯಲಲಿತಾ ಸಾವಿನ ಆಘಾತದಿಂದ ಹೊರಬರುವ ಹೊತ್ತಿಗೆ ಚಂಡ ಮಾರುತಕ್ಕೆ ತತ್ತರಿಸಿದ್ದು, ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದೆ.
ಪಂದ್ಯ ಆರಂಭವಾಗುವ ಹೊತ್ತಿಗೆ ಎಲ್ಲವೂ ಸರಿ ಹೋಗುವ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ. ಮಳೆಯಿಂದಾಗಿ ಒದ್ದೆಯಾಗಿರುವ ಪಿಚ್‌ನ್ನು ಕಲ್ಲಿದ್ದಲು ಉರಿಸಿ ಒಣಗಿಸುವ ಪ್ರಯತ್ನವನ್ನು ಸಿಬ್ಬಂದಿಗಳು ಮಾಡಿದ್ದಾರೆ.
ಬುಧವಾರ ಪಿಚ್ ಒದ್ದೆಯಾಗಿದ್ದ ಕಾರಣದಿಂದಾಗಿ ಭಾರತದ ಕ್ರಿಕೆಟ್ ತಂಡದ ಆಟಗಾರರಿಗೆ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಪಿಚ್ ಒದ್ದೆಯಾಗಿದೆ. ಕ್ರೀಡಾಂಗಣದಲ್ಲಿ ನೀರು ನಿಂತಿಲ್ಲ. ದೇಶದಲ್ಲೇ ಅತ್ಯುತ್ತಮ ಡ್ರೈನೆಜ್ ವ್ಯವಸ್ಥೆಯನ್ನು ಹೊಂದಿರುವ ಕ್ರೀಡಾಂಗಣಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.
ಭಾರತ ಈಗಾಗಲೇ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಒಂದು ವೇಳೆ ಭಾರ ತ 4-0 ಅಂತರದಲ್ಲಿ ಜಯ ಗಳಿಸಿದರೆ ಭಾರತಕ್ಕೆ ದೊಡ್ಡ ಗೆಲುವು ದೊರಕಿದಂತಾಗುತ್ತದೆ. ಭಾರತದ ಹಿಂದಿನ ಯಶಸ್ಸು 3-0. ಮುಹಮ್ಮದ್ ಅಝರುದ್ಧೀನ್ ನಾಯಕತ್ವದಲ್ಲಿ ಭಾರತ 1992-93ರಲ್ಲಿ ಭಾರತ ಈ ಸಾಧನೆ ಮಾಡಿತ್ತು. ಇಂಗ್ಲೆಂಡ್ ವಿರುದ್ಧ ಎರಡು ಸೋಲಿಗೆ ಸೇಡು ತೀರಿಸಲು ಭಾರತಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ. ಅಪೂರ್ವ ಫಾರ್ಮ್‌ನಲ್ಲಿರುವ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಇನ್ನೊಂದು ಗೆಲುವಿನ ಕನಸು ಕಾಣುತ್ತಿದ್ದಾರೆ.
ಮುಂಬೈಯಲ್ಲಿ ನಡೆದ ನಾಲ್ಕನೆ ಟೆಸ್ಟ್‌ನಲ್ಲಿ ಕೊಹ್ಲಿ 235 ರನ್ ದಾಖಲಿಸುವ ಮೂಲಕ ಜೀವನಶ್ರೇಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದರು. ಒಂದೇ ವರ್ಷ ಮೂರು ದ್ವಿಶತಕಗಳನ್ನು ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.
28ರ ಹರೆಯದ ಕೊಹ್ಲಿ ಅವರು ಒಂದೇ ವರ್ಷ ಮೂರು ವಿಶ್ವ ದಾಖಲಿಸಿರುವ ಐವರು ವಿಶ್ವಶ್ರೇಷ್ಠ ದಾಂಡಿಗರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಆಸ್ಟ್ರೇಲಿಯದ ಡಾನ್ ಬ್ರಾಡ್ಮನ್ ಮತ್ತು ರಿಕಿ ಪಾಂಟಿಂಗ್ ಒಂದೇ ವರ್ಷ ಮೂರು ದ್ವಿಶತಕ ದಾಖಲಿಸಿದ್ದರು. ಒಂದೇ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ್ದ ಸುನೀಲ್ ಗವಾಸ್ಕರ್ (774) ಅವರ ದಾಖಲೆಯನ್ನು ಹಿಂದಿಕ್ಕಲು ಕೊಹ್ಲಿಗೆ ಇನ್ನು 135 ರನ್ ಗಳಿಸಬೇಕಾಗಿದೆ. ಕೊಹ್ಲಿ ಚಿಪಾಕ್ ಕ್ರೀಡಾಂಗಣದಲ್ಲಿ ಮಿಂಚುವ ಉತ್ಸಾಹದಲ್ಲಿದ್ದಾರೆ.
ಮೂರು ವರ್ಷಗಳ ಬಳಿಕ ಚಿಪಾಕ್‌ನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಇದೀಗ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಕೊಹ್ಲಿ ತಂಡವನ್ನು ನಾಯಕರಾಗಿ ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ತಂಡದ ಅಗ್ರ ಸರದಿಯಿಂದ ಕೊನೆಯ ತನಕ ಚೆನ್ನಾಗಿ ಆಡುವ ಆಟಗಾರರು ತಂಡದಲ್ಲಿ ಇದ್ದಾರೆ. ಮುರಳಿ ವಿಜಯ್ ತಂಡದ ಉತ್ತಮ ಆರಂಭಿಕ ದಾಂಡಿಗನಾಗಿ ಮಿಂಚುತ್ತಿದ್ದಾರೆ. ಅವರು ಈಗಾಗಲೇ ಪ್ರಸಕ್ತ ಸರಣಿಯಲ್ಲಿ ಎರಡು ಶತಕ ದಾಖಲಿಸಿದ್ದಾರೆ.
ಮುರಳಿ ವಿಜಯ್‌ಗೆ ಯುವ ದಾಂಡಿಗ ಕೆ.ಎಲ್ ರಾಹುಲ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಮೊಹಾಲಿಯಲ್ಲಿ ಮೂರನೆ ಟೆಸ್ಟ್‌ನಿಂದ ಗಾಯಾಳುವಾಗಿ ಹೊರಗುಳಿದಿದ್ದ ರಾಹುಲ್ ಅವರು ನಾಲ್ಕನೆ ಟೆಸ್ಟ್‌ಗೆ ವಾಪಸಾಗಿದ್ದರೂ, ಅವರಿಂದ ತಂಡಕ್ಕೆ ದೊಡ್ಡ ಕೊಡುಗೆ ಲಭ್ಯವಾಗಿಲ್ಲ.
ಚೇತೇಶ್ವರ ಪೂಜಾರ ನಂ.3 ಕ್ರಮಾಂಕದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಅರ್ಧಶತಕ ವಂಚಿತಗೊಂಡಿದ್ದರು. ಅಂತಿಮ ಟೆಸ್ಟ್‌ನಲ್ಲಿ ತನ್ನ ಸಾಧನೆಯನ್ನು ಉತ್ತಮಪಡಿಸಲು ನೋಡುತ್ತಿದ್ದಾರೆ.
ವೃದ್ದಿಮಾನ್ ಸಹಾ ಬದಲಿಗೆ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನು ಗಿಟ್ಟಿಸಿಕೊಂಡ ಪಾರ್ಥಿವ್ ಪಟೇಲ್ ಆಯ್ಕೆಗಾರರ ನೀರೀಕ್ಷೆಗೆ ತಕ್ಕಂತೆ ಆಡಿದ್ದಾರೆ. ಎಂಟು ವರ್ಷಗಳ ಬಳಿಕ ತಂಡಕ್ಕೆ ಆಗಮಿಸಿದ್ದರೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಪೂರ್ವ ಫಾರ್ಮ್‌ನಲ್ಲಿದ್ದಾರೆ. 250 ವಿಕೆಟ್‌ಗಳ ಮೈಲುಗಲ್ಲನ್ನು ತಲುಪಲು ಅವರಿಗೆ ಇನ್ನು 3 ವಿಕೆಟ್‌ಗಳ ಆವಶ್ಯಕತೆ ಇದೆ. ಅಶ್ವಿನ್ ಈ ಸರಣಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ನ ಆದಿಲ್ ರಶೀದ್ 22 ವಿಕೆಟ್ ಗಳನ್ನು ಪಡೆದು ಎರಡನೆ ಸ್ಥಾನದಲ್ಲಿದ್ದಾರೆ. ಅಶ್ವಿನ್ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಐದನೆ ಟೆಸ್ಟ್ ಅವರ ತವರಿನಲ್ಲಿ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದಿದೆ. ರವೀಂದ್ರ ಜಡೇಜ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಜಯಂತ್ ಯಾದವ್ ಚೊಚ್ಚಲ ಶತಕ ದಾಖಲಿಸಿದ್ದಾರೆ. ನಂ.9 ಆಟಗಾರನಾಗಿ ಕಣಕ್ಕಿಳಿದು ದಾಖಲೆ ನಿರ್ಮಿಸಿದ್ದಾರೆ. ಮುಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಭುವನೇಶ್ವರ ಕುಮಾರ್ ಮತ್ತು ಉಮೇಶ್ ಯಾದವ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ಧಾರೆ.
ಸರಣಿಯನ್ನು ಕಳೆದುಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಹೋರಾಟ ನಡೆಸಲು ಕೊನೆಯ ಟೆಸ್ಟ್‌ನಲ್ಲಿ ಅವಕಾಶ ಸಿಕ್ಕಿದೆ. ಈ ಪಂದ್ಯದಲ್ಲೂ ಸೋತರೆ ನಾಯಕ ಅಲಿಸ್ಟರ್ ಕುಕ್ ನಾಯಕತ್ವಕ್ಕೆ ಸವಾಲು ಎದುರಾಗಲಿದೆ.
ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ಕರುಣ್ ನಾಯರ್,ರವಿಚಂದ್ರನ್ ಅಶ್ವಿನ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಜಯಂತ್ ಯಾದವ್, ಭುವನೇಶ್ವರ ಕುಮಾರ್, ಉಮೇಶ್ ಯಾದವ್,ಅಮಿತ್ ಮಿಶ್ರಾ, ಇಶಾಂತ್ ಶರ್ಮ, ಮನೀಷ್ ಪಾಂಡ್ಯ, ಮುಹಮ್ಮದ್ ಶಮಿ, ಶಾರ್ದೂಲ್ ಠಾಕೂರ್.
ಇಂಗ್ಲೆಂಡ್: ಅಲಿಸ್ಟರ್ ಕುಕ್( ನಾಯಕ), ಕೀಟನ್ ಜೆನ್ನಿಂಗ್ಸ್ , ಜೋ ರೂಟ್,ಮೊಯಿನ್ ಅಲಿ,ಬೆನ್ ಸ್ಟೋಕ್ಸ್, ಜೋನಿ ಬೈರ್‌ಸ್ಟೋವ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಜೋಸ್ ಬಟ್ಲರ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜಾಕ್ ಬಾಲ್, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಗಾರೆತ್ ಬ್ಯಾಟಿ, ಸ್ಟೀವನ್ ಫಿನ್. ಪಂದ್ಯದ ಸಮಯ : ಬೆಳಗ್ಗೆ 9:30ಕ್ಕೆ ಆರಂಭ.
ಅಂಕಿ -ಅಂಶ
*ಇಂಗ್ಲೆಂಡ್ ಚೆನ್ನೈನಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿವೆ. 3ರಲ್ಲಿ ಗೆಲುವು ಮತ್ತು 4ರಲ್ಲಿ ಸೋಲು ಅನುಭವಿಸಿದೆ. ಭಾರತ ಇಲ್ಲಿ ನಡೆದಿರುವ 31 ಪಂದ್ಯಗಳಲ್ಲಿ 13ರಲ್ಲಿ ಜಯ ಗಳಿಸಿದೆ.
*ಕೊಹ್ಲಿ ಸರಣಿಯಲ್ಲಿ 4 ಟೆಸ್ಟ್‌ಗಳಲ್ಲಿ 640 ರನ್ ಗಳಿಸಿದ್ದಾರೆ. ಇನ್ನು 135 ರನ್ ಗಳಿಸಿದರೆ ಒಂದೇ ಸರಣಿಯಲ್ಲಿ ಗರಿಷ್ಠ ರನ್ ದಾಖಲಿಸಿರುವ ಗವಾಸ್ಕರ್ ದಾಖಲೆ ಸರಿಗಟ್ಟುವರು. ಗವಾಸ್ಕರ್ 1971ರ ವಿಂಡೀಸ್ ವಿರುದ್ಧದ ಸರಣಿಯಲ್ಲಿ 774 ರನ್ ಗಳಿಸಿದ್ದರು. *ಅಶ್ವಿನ್ ಸರಣಿಯಲ್ಲಿ 27 ವಿಕೆಟ್ ಪಡೆದಿದ್ದಾರೆ. ಇನ್ನು 9 ವಿಕೆಟ್ ಪಡೆದರೆ ಭಾರತದ ಬೌಲರ್ ಬಿ.ಎಸ್.ಚಂದ್ರಶೇಖರ್ ಇಂಗ್ಲೆಂಡ್ ವಿರುದ್ಧ 1972ರಲ್ಲಿ ಪಡೆದ 35 ವಿಕೆಟ್‌ಗಳ ದಾಖಲೆಯನ್ನು ಮುರಿದಂತಾಗುತ್ತದೆ.







