ತೆಪ್ಪ ದುರಂತ: ಇಬ್ಬರು ನೀರುಪಾಲು
ನಾವಿಕ ಅಪಾಯದಿಂದ ಪಾರು

ಪುತ್ತೂರು, ಡಿ.15: ಕುಮಾರಧಾರಾ ನದಿಯಲ್ಲಿ ನಡೆದ ತೆಪ್ಪ ದುರಂತವೊಂದರಲ್ಲಿ ಇಬ್ಬರು ನೀರುಪಾಲಾದ ಘಟನೆ ಗುರುವಾರ ಮಧ್ಯಾಹ್ನ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಗುಜ್ಜರ್ಮೆ ಎಂಬಲ್ಲಿ ನಡೆದಿದ್ದು, ತೆಪ್ಪವನ್ನು ನಡೆಸುತ್ತಿದ್ದ ನಾವಿಕ ಅಪಾಯದಿಂದ ಪಾರಾಗಿದ್ದಾರೆ.
ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಂಞಣ್ಣ ಗೌಡ(70) ಮತ್ತು ಸುಳ್ಯ ತಾಲೂಕಿನ ಚೊಕ್ಕಾಡಿ ನಿವಾಸಿ ಗಣೇಶ್(60) ನೀರುಪಾಲಾದವರು. ತೆಪ್ಪದ ನಾವಿಕ ಗುಜ್ಜರ್ಮೆ ನಿವಾಸಿ ನಾರಾಯಣ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಲಂಕಾರು ಗ್ರಾಮದ ಬುಡೇರಿಯಾ ದೈವಸ್ಥಾನದಲ್ಲಿ ನೇಮೋತ್ಸವ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಕುಂಞಣ್ಣ ಹಾಗೂ ಗಣೇಶ್ ತೆಪ್ಪ ಮೂಲಕ ಹೊಳೆ ದಾಟಿ ಅಲ್ಲಿಗೆ ತೆರಳುತ್ತಿದ್ದ ವೇಳೆಯಲ್ಲಿ ತೆಪ್ಪ ನದಿ ಮಧ್ಯೆ ಪಲ್ಟಿಯಾಗಿ ದುರಂತ ಸಂಭವಿಸಿದೆ. ಕುಂಞಣ್ಣ ಅವರ ಪುತ್ರಿಯನ್ನು ಚಾರ್ವಾಕ ಗ್ರಾಮದ ಗುಜ್ಜರ್ಮೆಗೆ ವಿವಾಹ ಮಾಡಿಕೊಟ್ಟಿದ್ದರು. ಮಗಳ ಪತಿ ಮೃತಪಟ್ಟಿರುವ ಕಾರಣ ಅವರು ಮಗಳ ಮನೆಯಲ್ಲಿಯೇ ವಾಸವಿದ್ದರು.
ಗಣೇಶ್ ಮೂಲತಃ ತಮಿಳುನಾಡಿ ನವರಾಗಿದ್ದು, ಗುಜ್ಜರ್ಮೆ ಪ್ರಸಾದ್ ಜೋಶಿ ಅವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಇಬ್ಬರೂ ಬುಡೇರಿಯಾ ದೈವಸ್ಥಾನಕ್ಕೆ ತೆರಳುವ ಸಂದರ್ಭ ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಕಡಬ ವಿಶೇಷ ತಹಶೀಲ್ದಾರ್ ಬಿ.ಲಿಂಗಯ್ಯ, ಆರ್‌ಐ ಕೊರಗಪ್ಪ ಹೆಗಡೆ, ಜಿಪಂ ಸದಸ್ಯೆ ಪ್ರಮೀಳಾ ಜನಾರ್ದನ, ಪುತ್ತೂರು ಎಲ್‌ಡಿ ಬ್ಯಾಂಕ್ ನಿರ್ದೇಶಕ ಗಣೇಶ್ ಉದನಡ್ಕ, ಪ್ರದೀಪ್ ಬೊಬ್ಬೆಕೇರಿ, ಮೋಹನ್ ಎ.ಪಿ. ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸಿದರು.
ಅಗ್ನಿಶಾಮಕ ದಳದಿಂದ ಹುಡುಕಾಟ
ಪುತ್ತೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ನಾಪತ್ತೆಯಾದವರ ಬಗ್ಗೆ ನದಿಯಲ್ಲಿ ಹುಡುಕಾಟ ನಡೆಸಿದರು. ಆದರೆ ರಾತ್ರಿವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಸ್ಥಳೀಯ ಈಜುಪಟುಗಳಾದ ಕುಶಾಲಪ್ಪ ಉದಲಡ್ಕ, ಶೇಖರ್ ಉದಲಡ್ಕ, ಬಾಲಕೃಷ್ಣ ಬೀರೋಳಿಗೆ, ಪ್ರಶಾಂತ್ ಓಡದಕೆರೆ ಮತ್ತಿತರರು ನೀರಿನಲ್ಲಿ ಹುಡುಕಾಟ ನಡೆಸಿದರು. ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಕಡಬ ಠಾಣಾ ಎಎಸ್‌ಐ ರವಿ ಹಾಗೂ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದು, ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ.







