ರಾಹುಲ್‌ರ ಪ್ರಧಾನಿ ಭೇಟಿಯಿಂದ ವಿಪಕ್ಷಗಳ ಒಗ್ಗಟ್ಟು ಭಂಗ!

ಹೊಸದಿಲ್ಲಿ, ಡಿ.16: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಅವರ ಈ ಭೇಟಿಯಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ಪೂರ್ತಿ ಜಾಗ್ರತೆಯಿಂದ ಕಾಯ್ದುಕೊಂಡು ಬಂದಿದ್ದ ವಿಪಕ್ಷಗಳ ಒಗ್ಗಟ್ಟಿಗೆ ಭಾರೀ ಧಕ್ಕೆಯಾಗಿದೆ. ನೋಟು ನಿಷೇಧದ ವಿರುದ್ಧ ಪ್ರತಿಭಟಿಸಲು ಇಂದು ವಿಪಕ್ಷಗಳು ರಾಷ್ಟ್ರಪತಿ ಭವನದೆಡೆಗೆ ಮೆರವಣಿಗೆ ಹೊರಡುವ ಸ್ವಲ್ಪ ಮೊದಲು ರಾಹುಲ್‌ರಿಂದ ಈ ಹೊಡೆತ ಬಿದ್ದಿದೆ.
ಎಡಪಕ್ಷಗಳು, ಸಮಾಜವಾದಿ ಪಕ್ಷ, ಬಿಎಸ್ಪಿ, ಎನ್‌ಸಿ ಹಾಗೂ ಡಿಎಂಕೆ ಪಕ್ಷಗಳು, ಸಂಸತ್ ಆವರಣದ ಗಾಂಧಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗುವ ಸ್ವಲ್ಪ ಮೊದಲು ಒಂದೊಂದಾಗಿ ಪ್ರತಿಭಟನೆಯಿಂದ ಹೊರ ಬಂದವು.
ಇತರ ವಿಪಕ್ಷಗಳನ್ನು ಸೇರಿಸಿಕೊಳ್ಳದೆಯೇ ರಾಹುಲ್, ಪ್ರಧಾನಿಯ ಭೇಟಿಯಾದುದು ಅವುಗಳಿಗೆ ಬೇಸರ ತರಿಸಿದೆ. ಕಾಂಗ್ರೆಸ್‌ನ ಇತರ ಹಿರಿಯ ನಾಯಕರೊಂದಿಗೆ ಪ್ರಧಾನಿಯನ್ನು ಭೇಟಿಯಾದ ರಾಹುಲ್, ಉತ್ತರಪ್ರದೇಶದ ತನ್ನ ಚುನಾವಣಾ ಅಭಿಯಾನದ ವೇಳೆ ಭೇಟಿಯಾಗಿದ್ದ ರೈತರ ದುಃಸ್ಥಿತಿಯನ್ನು ಪ್ರಸ್ತಾವಿಸಿದರು.
ಪ್ರಧಾನಿಯನ್ನು ರಾಹುಲ್ ಭೇಟಿಯಾಗಿರುವ ಬಗ್ಗೆ ಕಿಡಿಗಾರಿರುವ ಬಿಎಸ್ಪಿ ಹಾಗೂ ಉತ್ತರಪ್ರದೇಶದಲ್ಲಿ ಮರು ಆಯ್ಕೆ ಬಯಸುತ್ತಿರುವ ಎಸ್ಪಿ, ತಮಗೆ ರೈತರ ದುಸ್ಥಿತಿಯ ಬಗ್ಗೆ ಕಳವಳವಿಲ್ಲವೇ? ಎಂದು ಪ್ರಶ್ನಿಸಿವೆ.
ನೋಟು ರದ್ದತಿಯ ವಿರುದ್ಧ 15 ವಿಪಕ್ಷಗಳು ಒಂದಾಗಿ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಪೂರ್ತಿ ಕೋಲಾಹಲವೆಬ್ಬಿಸಿ, ಯಾವುದೇ ಕಲಾಪ ನಡೆಯದಂತೆ ಮಾಡಿದ್ದವು. ಇಂದು ಅಧಿವೇಶನ ಕೊನೆಗೊಂಡಿದೆ.
ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ವಿಪಕ್ಷಗಳಾದ ಟಿಎಂಸಿ, ಜೆಡಿಯು ಹಾಗೂ ಆರ್‌ಜೆಡಿ ಪಕ್ಷಗಳ ನಿಯೋಗವೊಂದು ನೋಟು ರದ್ದತಿಯ ವಿಷಯದಲ್ಲಿ ರಾಷ್ಟ್ರಪತಿಯನ್ನು ಭೇಟಿಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಭ್ರಷ್ಟಾಚಾರದ ಬಗ್ಗೆ ತನ್ನಲ್ಲಿ ಮಾಹಿತಿಯಿದೆಯೆಂದು ಎರಡು ದಿನಗಳ ಹಿಂದೆ ಘೋಷಿಸಿದ್ದ ರಾಹುಲ್‌ರ ಬೆನ್ನಿಗೆ ದೃಢವಾಗಿ ನಿಂತಿದ್ದ ಎಡ ಹಾಗೂ ಇತರ ಪಕ್ಷಗಳು ಈಗ ಕಳಚಿಕೊಂಡಿವೆ.
ರಾಹುಲ್‌ರೊಂದಿಗಿನ ತನ್ನ ಭೇಟಿಯ ವೇಳೆ ಪ್ರಧಾನಿ ಮೋದಿ, ತಾವು ಯಾವಾಗಲೂ ಇದೇ ರೀತಿ ಭೇಟಿಯಾಗುತ್ತಿರಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಹೃದಯಗಳು ಭೇಟಿಯಾಗುವುದಿಲ್ಲವಾದರೂ ತಾವು ಕನಿಷ್ಠ ಸಹಕಾರ ನೀಡಿ ಕೈಕುಲುಕ ಬಲ್ಲೆವೆಂದು ಹೇಳಿದರು.







