ರಾಷ್ಟ್ರಪತಿ ಮುಖರ್ಜಿಯ ದಲಾಯಿ ಭೇಟಿಗೆ ಚೀನಾ ವಿರೋಧ
ಹಾನಿಯಾದ ಸಂಬಂಧ ಸರಿಪಡಿಸಲು ಒತ್ತಾಯ

ಬೀಜಿಂಗ್, ಡಿ. 16: ಮಕ್ಕಳ ಸಮ್ಮೇಳನವೊಂದರ ವೇಳೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರನ್ನು ಭೇಟಿಯಾಗಿರುವುದಕ್ಕೆ ಚೀನಾ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದ್ವಿಪಕ್ಷೀಯ ಸಂಬಂಧಗಳಿಗೆ ‘ಯಾವುದೇ ಧಕ್ಕೆ’ಯಾಗುವುದನ್ನು ತಡೆಯುವುದಕ್ಕಾಗಿ ಭಾರತ ಚೀನಾದ ‘ಮೂಲ ಹಿತಾಸಕ್ತಿ’ಗಳನ್ನು ಗೌರವಿಸಬೇಕಾಗಿದೆ ಎಂದು ಅದು ಹೇಳಿದೆ.
‘‘ಇತ್ತೀಚೆಗೆ, ಚೀನಾದ ಮನವಿ ಹಾಗೂ ಬಲವಾದ ವಿರೋಧದ ಹೊರತಾಗಿಯೂ ರಾಷ್ಟ್ರಪತಿ ಭವನಕ್ಕೆ ದಲಾಯಿ ಲಾಮಾರ ಭೇಟಿಯನ್ನು ಏರ್ಪಡಿಸಲು ಭಾರತೀಯ ಪಾಳಯ ಪಟ್ಟುಹಿಡಿದಿತ್ತು. ಅಲ್ಲಿ ದಲಾಯಿ ಲಾಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು ಹಾಗೂ ರಾಷ್ಟ್ರಪತಿ ಮುಖರ್ಜಿಯನ್ನು ಭೇಟಿಯಾದರು’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘‘ಈ ಬೆಳವಣಿಗೆಯಿಂದ ಚೀನಾಕ್ಕೆ ಅಸಮಾಧಾನವಾಗಿದೆ ಹಾಗೂ ಅದಕ್ಕೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತದೆ’’ ಎಂದು ಅವರು ಹೇಳಿದರು.
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿಯ ‘ಚಿಲ್ಡ್ರನ್ಸ್ ಫೌಂಡೇಶನ್’ ಡಿಸೆಂಬರ್ 10ರಂದು ಏರ್ಪಡಿಸಿದ ‘ಮಕ್ಕಳ ಸಮ್ಮೇಳನದ ಪುರಸ್ಕೃತರು ಮತ್ತು ನಾಯಕರ ಶೃಂಗಸಭೆ’ಯ ಉದ್ಘಾಟನಾ ಅಧಿವೇಶನದಲ್ಲಿ ದಲಾಯಿ ಲಾಮಾ ಉಪಸ್ಥಿತರಿದ್ದುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
‘‘ದಲಾಯಿ ಲಾಮಾ ರಾಜಕೀಯ ದೇಶಭ್ರಷ್ಟರಾಗಿದ್ದಾರೆ ಹಾಗೂ ಅವರು ಸುದೀರ್ಘ ಸಮಯದಿಂದ ಚೀನಾ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಧರ್ಮದ ಪರದೆಯಲ್ಲಿ ಟಿಬೆಟನ್ನು ಚೀನಾದಿಂದ ಪತ್ಯೇಕಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಗೆಂಗ್ ನುಡಿದರು.
ಇತರ ದೇಶಗಳ ನಾಯಕರು ದಲಾಯಿ ಲಾಮಾರೊಂದಿಗೆ ಸಂಪರ್ಕ ಹೊಂದುವುದನ್ನು ಚೀನಾ ತೀವ್ರವಾಗಿ ವಿರೋಧಿಸುತ್ತದೆ.
‘‘ದಲಾಯಿ ಲಾಮಾ ಗುಂಪಿನ ಚೀನಾ ವಿರೋಧಿ ಪ್ರತ್ಯೇಕತಾವಾದಿ ಪ್ರವೃತ್ತಿಯನ್ನು ಗಮನಿಸುವಂತೆ ಹಾಗೂ ಚೀನಾದ ಮೂಲ ಹಿತಾಸಕ್ತಿಗಳು ಮತ್ತು ಮಹತ್ವದ ಕಳವಳಗಳನ್ನು ಗೌರವಿಸುವಂತೆ ನಾವು ಭಾರತವನ್ನು ಒತ್ತಾಯಿಸುತ್ತೇವೆ. ಅದೇ ವೇಳೆ, ಭಾರತ-ಚೀನಾ ಸಂಬಂಧದಲ್ಲಿ ಉಂಟಾಗಿರಬಹುದಾದ ಯಾವುದೇ ಧಕ್ಕೆಯನ್ನು ಹೋಗಲಾಡಿಸುವುದಕ್ಕಾಗಿ, ಪರಿಣಾಮಕಾರಿ ಕ್ರಮಗಳನ್ನು ಭಾರತ ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ’’ ಎಂದು ಗೆಂಗ್ ಹೇಳಿದರು.







