100 ಕೋಟಿ ಇಮೇಲ್ ಖಾತೆಗಳಿಗೆ ಕನ್ನ : ಯಾಹೂ ಸಿಡಿಸಿದ ಬಾಂಬ್

ಸ್ಯಾನ್‌ಫ್ರಾನ್ಸಿಸ್ಕೊ, ಡಿ. 16: 2014ರಲ್ಲಿ ತನ್ನ 50 ಕೋಟಿ ಬಳಕೆದಾರರ ಇಮೇಲ್ ಖಾತೆಗಳಿಗೆ ಕನ್ನ ಬಿದ್ದಿತ್ತು ಎಂಬುದಾಗಿ ಸೆಪ್ಟಂಬರ್‌ನಲ್ಲಿ ಬಹಿರಂಗಪಡಿಸಿದ್ದ ಯಾಹೂ, ಈಗ ಇನ್ನೊಂದು ಅದಕ್ಕಿಂತಲೂ ದೊಡ್ಡ ಬಾಂಬ್ ಹಾಕಿದೆ.
2013ರಲ್ಲಿ 100 ಕೋಟಿಗಿಂತಲೂ ಹೆಚ್ಚಿನ ಇಮೇಲ್ ಖಾತೆಗಳಿಗೆ ಕನ್ನ ಬಿದ್ದಿದೆ ಎಂದು ಅದು ಹೇಳಿದೆ.
ಈ ಎರಡು ಸೈಬರ್ ದಾಳಿಗಳು ಕಂಪೆನಿಯೊಂದರ ಕಂಪ್ಯೂಟರ್ ಜಾಲದ ಮೇಲೆ ನಡೆದ ಅತ್ಯಂತ ದೊಡ್ಡ ಭದ್ರತಾ ದಾಳಿಯಾಗಿದೆ.
2013ರ ದಾಳಿಯಲ್ಲಿ ಹೆಸರುಗಳು, ಟೆಲಿಫೋನ್ ನಂಬರ್‌ಗಳು, ಹುಟ್ಟಿದ ದಿನಾಂಕಗಳು, ಸಂಕೇತೀಕರಣಗೊಳಿಸಲಾದ (ಎನ್‌ಕ್ರಿಪ್ಟಡ್) ಪಾಸ್‌ವರ್ಡ್‌ಗಳು ಮತ್ತು ಸಂಕೇತೀಕರಣಗೊಳ್ಳದ (ಅನ್‌ಎನ್‌ಕ್ರಿಪ್ಟಡ್) ಭದ್ರತಾ ಪ್ರಶ್ನೆಗಳು (ಈ ಪ್ರಶ್ನೆಗಳನ್ನು ಉಪಯೋಗಿಸಿ ಬೇರೆ ಪಾಸ್‌ವರ್ಡ್‌ಗಳನ್ನು ಸೃಷ್ಟಿಸಬಹುದಾಗಿದೆ) ಸೇರಿದಂತೆ ಬಳಕೆದಾರರ ಸೂಕ್ಷ್ಮ ಮಾಹಿತಿಗಳನ್ನು ಕದಿಯಲಾಗಿದೆ.
ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸುವಂತೆ ತಾನು ಒತ್ತಡ ಹೇರುತ್ತಿದ್ದೇನೆ ಹಾಗೂ ಸಂಕೇತೀಕರಣಗೊಳ್ಳದ ಭದ್ರತಾ ಪ್ರಶ್ನೆಗಳನ್ನು ಅಮಾನ್ಯಗೊಳಿಸುತ್ತಿದ್ದೇನೆ ಎಂದು ಯಾಹೂ ತಿಳಿಸಿದೆ.





