ನೋಟು ರದ್ದತಿ: ಮಧ್ಯಂತರ ಆದೇಶಕ್ಕೆ ಸುಪ್ರೀಂಕೋರ್ಟ್ ನಿರಾಕರಣೆ

ಹೊಸದಿಲ್ಲಿ, ಡಿ.16: ಅಮಾನ್ಯಗೊಂಡಿರುವ ಕರೆನ್ಸಿ ನೋಟುಗಳನ್ನು ಆಸ್ಪತ್ರೆ ಮತ್ತು ರೈಲ್ವೇ ಟಿಕೆಟ್ ಕೌಂಟರ್‌ಗಳಲ್ಲಿ ಬಳಸಲು ಅನುಕೂಲವಾಗುವ ನಿಟ್ಟಿನಲ್ಲಿ ಕಾಲಮಿತಿಯನ್ನು ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆದರೆ ವಾರಕ್ಕೆ 24 ಸಾವಿರ ರೂ. ಹಣ ವಾಪಾಸು ಪಡೆಯಬಹುದು ಎಂಬ ಸೂತ್ರಕ್ಕೆ ಬದ್ದವಾಗಿರುವಂತೆ ಕೇಂದ್ರಕ್ಕೆ ಸೂಚಿಸಿದೆ.
ಸರಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ತಾನು ಬಯಸುವುದಿಲ್ಲ ಎಂದು ತಿಳಿಸಿರುವ ಸುಪ್ರೀಂಕೋರ್ಟ್, 9 ಪ್ರಶ್ನೆಗಳನ್ನು ಸಿದ್ದಪಡಿಸಿ, ಇದನ್ನು ಐವರು ನ್ಯಾಯಮೂರ್ತಿಗಳನ್ನು ಹೊಂದಿರುವ ಸಾಂವಿಧಾನಿಕ ಪೀಠವೊಂದಕ್ಕೆ ಒಪ್ಪಿಸಿದೆ. ಈ ಪೀಠವು ಸರಕಾರಕ್ಕೆ ನೋಟೀಸ್ ಕಳುಹಿಸಿ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಿದೆ. ನೋಟು ಅಮಾನ್ಯ ವಿಷಯವನ್ನು ಪ್ರಶ್ನಿಸಿ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆ ನಡೆವುದನ್ನು ನಿರ್ಬಂಧಿಸಿದ ಸುಪ್ರೀಂಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಮಾತ್ರ ಈ ವಿಷಯದ ವಿಚಾರಣೆ ನಡೆಯಬೇಕು ಎಂದು ಸೂಚಿಸಿದೆ.
ಬ್ಯಾಂಕ್ ಅಧಿಕಾರಿಗಳು ಹೊಸ ಕರೆನ್ಸಿ ನೋಟುಗಳಲ್ಲಿ 5 ಲಕ್ಷ ಕೋಟಿ ಮೊತ್ತದ ಹಣವನ್ನು ಹೊಂದಿರಲು ಹೇಗೆ ಸಾಧ್ಯವಾಯಿತು ಎಂದು ನ್ಯಾಯಮೂರ್ತಿ ಟಿ.ಎಸ್.ಠಾಕುರ್ ಅವರ ನೇತೃತ್ವದ ವಿಭಾಗೀಯ ಪೀಠ ಅಚ್ಚರಿ ವ್ಯಕ್ತಪಡಿಸಿತು. ನೋಟು ಅಮಾನ್ಯಗೊಳಿಸಿದ ಬಳಿಕ ಚಲಾವಣೆಗೆ ತರಲಾದ ಕರೆನ್ಸಿ ನೋಟುಗಳ ಭದ್ರತೆಯ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನೂ ವಿಭಾಗೀಯ ಪೀಠ ಪ್ರಶ್ನಿಸಿತು.
ಬ್ಯಾಂಕ್ ಅಧಿಕಾರಿಗಳು ನೋಟು ಬದಲಾಯಿಸುವ ಪ್ರಕ್ರಿಯೆಯಲ್ಲಿ ವಂಚನೆ ಎಸಗಿದ್ದಾರೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್‌ಗಿ ಒಪ್ಪಿಕೊಂಡರು. ಜನಸಾಮಾನ್ಯರು ವಾರಕ್ಕೆ 24 ಸಾವಿರ ರೂ. ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಕೆಲವರು ಕೋಟಿಗಟ್ಟಲೆ ಹಣ ಪಡೆಯುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು. ಹಣದ ಹಂಚಿಕೆ, ಬಟವಾಡೆ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂದು ವಿಭಾಗೀಯ ಪೀಠ ಪ್ರಶ್ನಿಸಿತು.







