ಸೌದಿ ಮಹಿಳೆಯರನ್ನು ಮದುವೆಯಾಗುವ ವಿದೇಶೀಯರಿಗೆ ಕಡ್ಡಾಯ ದ್ರವ್ಯ ಪರೀಕ್ಷೆ
ಸೌದಿ ಅರೇಬಿಯದಲ್ಲಿ ಹೊಸ ಕಾನೂನು

ರಿಯಾದ್, ಡಿ. 16: ಸೌದಿ ಅರೇಬಿಯದ ಮಹಿಳೆಯರನ್ನು ಮದುವೆಯಾಗಬಯಸುವ ವಿದೇಶೀಯರ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಹೇರಲು ಮುಂದಾಗಿರುವ ಸೌದಿ ಸರಕಾರ, ಮದುವೆಯ ಮೊದಲು ವಿದೇಶೀಯರು ಮಾದಕ ದ್ರವ್ಯ ಸೇವನೆ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯವಾಗಿಸಿದೆ.
ಸರಕಾರ ಅನುಮೋದಿಸಿರುವ ಈ ನೂತನ ಕ್ರಮಗಳು ವಿದೇಶೀಯರೊಂದಿಗಿನ ಸೌದಿ ಮಹಿಳೆಯರ ಮದುವೆಯನ್ನು ನಿರುತ್ತೇಜಿಸುತ್ತವೆ ಹಾಗೂ ಮದುವೆಯ ಬಳಿಕ ದಂಪತಿಗಳು ಮಾದಕ ದ್ರವ್ಯ ಮತ್ತು ಕುಡಿತದ ಚಟಗಳಿಂದಾಗಿ ನರಳದಂತೆ ಖಾತರಿಪಡಿಸುತ್ತವೆ.
ಆರೋಗ್ಯ ಸಚಿವಾಲಯವು ದೇಶದಲ್ಲಿರುವ ಎಲ್ಲ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಈ ನೂತನ ಕಾನೂನಿನ ಬಗ್ಗೆ ಮಾಹಿತಿ ನೀಡಿದೆ.
ಸೌದಿ ರಾಷ್ಟ್ರೀಯರನ್ನು ಮದುವೆಯಾಗಬಯಸುವ ವಿದೇಶಿ ಪುರುಷರು ಮತ್ತು ಮಹಿಳೆಯರು ವೈದ್ಯಕೀಯ ತಪಾಸಣೆಗೆ ಕಡ್ಡಾಯವಾಗಿ ಒಳಪಡಬೇಕಾಗುತ್ತದೆ ಹಾಗೂ ವರದಿಯು ಮಾದಕ ದ್ರವ್ಯ ಪರೀಕ್ಷೆಯ ಫಲಿತಾಂಶದ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಸೌದಿ ವಧು ಅಥವಾ ವರರನ್ನು ಮದುವೆಯಾಗಬಯಸುವ ವಿದೇಶೀಯರಿಗೆ ವಿಧಿಸಲಾಗಿರುವ ಅರ್ಹತಾ ಮಾನದಂಡಗಳಾಗಿವೆ.





