ಅಜ್ಮಾನ್: ನಕಲಿ ವಸ್ತುಗಳ ಸಾಗಣೆಗಾಗಿ 137 ಬಂಧನ

ಅಜ್ಮಾನ್, ಡಿ. 16: ಯುಎಇಯ ಘಟಕ ದೇಶವಾಗಿರುವ ಅಜ್ಮಾನ್ ಒಳಗೆ ಈ ವರ್ಷ ನಕಲಿ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಅಜ್ಮಾನ್ ಪೊಲೀಸರು 137 ಮಂದಿಯನ್ನು ಬಂಧಿಸಿದ್ದಾರೆ.
ಅಜ್ಮಾನ್ ಪೊಲೀಸರು ಇತ್ತೀಚೆಗೆ ಏರ್ಪಡಿಸಿದ ನಕಲಿ ಮತ್ತು ವ್ಯಾಪಾರ ವಂಚನೆ ನಿಗ್ರಹ ವೇದಿಕೆಯಲ್ಲಿ ಮಾತನಾಡಿದ ಅಜ್ಮಾನ್ ಪೊಲೀಸ್‌ನ ಮುಖ್ಯಸ್ಥ ಬ್ರಿಗೇಡಿಯರ್ ಶೇಖ್ ಸುಲ್ತಾನ್ ಅಲ್ ನುವಾಮಿ, ನಕಲಿ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು ದಂಧೆಯಾಗಿದೆ ಎಂದು ಹೇಳಿದರು. ಇದು ದೇಶದ ಭದ್ರತೆ, ಆರ್ಥಿಕತೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.
‘‘ಈ ಪ್ರವೃತ್ತಿಯನ್ನು ನಿಗ್ರಹಿಸಲು ಸಂಬಂಧಪಟ್ಟ ಇಲಾಖೆಗಳು ಮತ್ತು ಸಾರ್ವಜನಿಕರ ನಡುವೆ ವ್ಯಾಪಕ ಸಹಕಾರ ಅಗತ್ಯ’’ ಎಂದು ಅವರು ಹೇಳಿದರು.
ನಕಲಿ ವಸ್ತುಗಳನ್ನು ಕಳ್ಳಸಾಗಣೆ ಮಾಡಿರುವುದಕ್ಕಾಗಿ ಚೀನಾದ 38 ವ್ಯಕ್ತಿಗಳು, ಭಾರತದ 27, ಸಿರಿಯದ 19, ಇರಾಕ್‌ನ 17, ಫಿಲಿಪ್ಪೀನ್ಸ್‌ನ 13, ಬಾಂಗ್ಲಾದೇಶದ 11, ಪಾಕಿಸ್ತಾನದ 7, ಫ್ರಾನ್ಸ್ ಮತ್ತು ಅಮೆರಿಕದ ತಲಾ ಇಬ್ಬರು ಮತ್ತು ಯುಎಇಯ ಒಬ್ಬನನ್ನು ಬಂಧಿಸಲಾಗಿದೆ ಎಂದರು.







